ಡೈಲಿ ವಾರ್ತೆ: 08/ಜುಲೈ /2024
ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯ ರಕ್ಷಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ನಡುವೆ ಆತ್ಮಹತ್ಯೆಗೆ ಯತ್ನಿಸಿ ಕುಮಾರಧಾರಾ ನದಿ ಮಧ್ಯೆ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳದ ಪುಳಿಕುಕ್ಕು ಬಳಿ ಹರಿಯುತ್ತಿರುವ ಕುಮಾರಧಾರಾ ನದಿಯಲ್ಲಿ ಈ ಘಟನೆ ನಡೆದಿದೆ. ಬೆಂಗಳೂರು ಮೂಲದ ರವಿಕುಮಾರ್ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ.
ರವಿಕುಮಾರ್ ಅವರು ನದಿ ಮಧ್ಯೆ ಪೊದೆ ಹಿಡಿದುಕೊಂಡು ನಿಂತಿರುವುದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಈ ವಿಚಾರವನ್ನು ಕೂಡಲೇ ಅವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಕಡಬ ಎಸ್‍ಐ ಅಭಿನಂದನ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ.
ಕಡಬ ಪೊಲೀಸ್, ಅಗ್ನಿಶಾಮಕ ದಳ, ಶೌರ್ಯ ತಂಡದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಕಡಬ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಡಬ ಆಸ್ಪತ್ರೆಗೆ ತಹಶಿಲ್ದಾರ್ ಪ್ರಭಾಕರ್ ಖಜೂರೆ ಭೇಟಿ ನೀಡಿದ್ದಾರೆ.