ಡೈಲಿ ವಾರ್ತೆ: 18/ಜುಲೈ /2024

ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆ, 10 ಕುಟುಂಬಗಳ ಸ್ಥಳಾಂತರ, ನದಿ ಪಾತ್ರದ ಗಾಮಗಳ ತೋಟಗಳಿಗೆ ನೀರು, ಮಂಗಳೂರು ಸಹಾಯಕ ಕಮಿಷನರ್ ಹರ್ಷವರ್ಧನ ಪಿ.ಜೆ ಭೇಟಿ

ಬಂಟ್ವಾಳ : ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಏರುತ್ತಲೇ ಇದ್ದು, ಬಂಟ್ವಾಳದಲ್ಲಿ ನೀರಿನ ಮಟ್ಟ ಸುಮಾರು 8 ಮೀ.ಗೆ ತಲುಪಿದ ಹಿನ್ನೆಲೆ ಪಾಣೆಮಂಗಳೂರಿನ ಆಲಡ್ಕದಲ್ಲಿ ಮನೆಗಳು ಮುಳುಗಡೆಯಾಗಿದ್ದು, ಸುಮಾರು 10 ಕುಟುಂಬಗಳನ್ನು ತಾಲೂಕು ಆಡಳಿತ ಸ್ಥಳಾಂತರ ಮಾಡಿದೆ.

ಬಂಟ್ವಾಳದ ಜಾಲಾವೃತ ಪ್ರದೇಶಗಳಿಗೆ ಮಂಗಳೂರು ಸಹಾಯಕ ಕಮಿಷನರ್  ಹರ್ಷವರ್ಧನ ಪಿ.ಜೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದರು.

 ಬಂಟ್ವಾಳದಲ್ಲಿ ನದಿ ನೀರಿನ ಅಪಾಯಕಾರಿ ಮಟ್ಟ 8.5 ಮೀ.ಆಗಿದ್ದು, ನಿನ್ನೆ ಸಂಜೆಯಿಂದ ನೀರಿನ ಮಟ್ಟ ಏರುತ್ತಲೇ ಇದೆ. ತಾಲೂಕಿನ ನದಿ ಪಾತ್ರದ ಗ್ರಾಮಗಳಾದ ಸರಪಾಡಿ, ಬರಿಮಾರು, ಮಣಿನಾಲ್ಕೂರು ಗ್ರಾಮಗಳಲ್ಲಿ ಕೆಲವೊಂದು ತೋಟ, ಗದ್ದೆಗಳಿಗೆ ನೀರು ನುಗ್ಗಿದೆ.

ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ‌. ಜಲಾವೃತಗೊಂಡ ಪಾಣೆಮಂಗಳೂರು ಆಲಡ್ಕ ಸಹಿತ ಅನೇಕ ಕಡೆಗಳಿಗೆ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ದನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆಲಡ್ಕದಲ್ಲಿ ನೆರೆ ನುಗ್ಗಿದ ಮನೆಗಳ ಸದಸ್ಯರನ್ನು ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಇನ್ನು 5 ಮನೆಗಳಿಗೆ ನೀರು ನುಗ್ಗುವ ಬೀತಿ ಇರುವುದರಿಂದ ಅವರನ್ಬು ಕೂಡ ಸುರಕ್ಷಿತ ಸ್ಥಳ ಸ್ಥಳಾಂತರ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. 

ಪಾಣೆಮಂಗಳೂರು ಶಾರದ ಪ್ರೌಢಶಾಲೆಯಲ್ಲಿ ಗಂಜಿ ಕೇಂದ್ರವನ್ಬು ತೆರೆಯಲಾಗಿದೆ.
ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿರುವುದರಿಂದ ನದಿ ತೀರಕ್ಕೆ ಯಾರು ಹೋಗಕೂಡದು ಮತ್ತು ನೀರಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಪುರಸಭಾ ಸದಸ್ಯ ಅಬುಬಕ್ಜರ್  ಸಿದ್ದೀಕ್ ಗುಡ್ಡೆಯಂಗಡಿ , ತಹಶಿಲ್ದಾರ್ ಅರ್ಚನಾ ಭಟ್ ಹಾಗೂ ಅಧಿಕಾರಿಗಳು ಹಾಜರಿದ್ದರು.