ಡೈಲಿ ವಾರ್ತೆ: 19/ಜುಲೈ /2024

ಸಾಲಿಗ್ರಾಮ: ಕಾರ್ಕಡ ಬಡಹೋಳಿಯಲ್ಲಿ ಮುಳುಗುತಿದೆ ಕೃಷಿಭೂಮಿ ಮತ್ತು ಮನೆಗಳು – ಮನಕಲುಕುವಂತ್ತಿದೆ ಬದುಕು.!

ಕೋಟ: ಬ್ರಹ್ಮಾವರ ತಾಲೂಕು ಕಾರ್ಕಡ ಬಡಾಹೋಳಿಯ ಕೃಷಿ ಭೂಮಿ ಮತ್ತು ಮನೆಗಳು ಪ್ರತಿ ಮಳೆಗಾಲದಲ್ಲಿ ಸಣ್ಣ ಮಳೆಗೂ ಜಲಾವೃತ್ತವಾಗುತ್ತಿವೆ. ಈ ಬಾರಿಯ ಭಾರೀ ಮಳೆಯಿಂದಾಗಿ ಸುಮಾರು 20 ಕ್ಕೂ ಹೆಚ್ಚು ಮನೆಗಳು ಜಲಾವೃತ್ತವಾಗಿದ್ದು, ನೂರು ಎಕ್ರೆ ಕೃಷಿ ಪ್ರದೇಶ ನಾಶವಾಗಿದೆ. ಶೀಘ್ರ ಹೊಳೆಯ ಹೂಳೆತ್ತಿ, ಈ ಪ್ರದೇಶದ ಜನರ ಸಂಕಷ್ಟವನ್ನು ಪರಿಹರಿಸಬೇಕು ಎಂದು ಈ ಭಾಗದ ಕೃಷಿಕರು ಆಗ್ರಹಿಸಿದ್ದಾರೆ.

ಸಾಲಿಗ್ರಾಮದಲ್ಲಿ ಈ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿದ ರೈತರು ಈ ಪ್ರದೇಶದ ನೆರೆ ಹಾವಳಿಯ ಚಿತ್ರಣವನ್ನು ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ.

ಚಿತ್ರಪಾಡಿ ವ್ಯಾಪ್ತಿಯ 60 ಎಕ್ರೆ ಕೃಷಿ ಭೂಮಿ ಇನ್ನೂ ಕೂಡ ನಾಟಿ ಮಾಡುವ ಸ್ಥಿತಿ ಇಲ್ಲ. ಈ ಭಾಗದಲ್ಲಿ ಹಿರೇ ಹೊಳೆ ಎನ್ನುವ ಹೊಳೆಯಲ್ಲಿ ಹೂಳು ತುಂಬಿದ್ದೇ ಈ ಸಮಸ್ಯೆಗೆ ಕಾರಣ. ಚಿತ್ರಪಾಡಿಯಿಂದ ಹೋಗುವ ಹೊಳೆ ನೀರು ಸರಾಗವಾಗಿ ಹರಿಯಲು ಅಲ್ಲಲ್ಲಿ ಇರುವ ದಿಬ್ಬಗಳು ತಡೆಯಾಗಿದೆ. ಸುಮಾರು 12 ವರ್ಷದ ಹಿಂದೆ ಒಮ್ಮೆ ಹೂಳು ತೆಗೆದ ಪರಿಣಾಮ ಸುಮಾರು ಐದು ವರ್ಷಗಳ ಕಾಲ ಯಾವುದೇ ನೆರೆ ಸಮಸ್ಯೆ ಇರಲಿಲ್ಲ. ಇದೀಗ ಐದಾರು ವರ್ಷದಿಂದ ಮತ್ತೆ ನೆರೆ ಸಮಸ್ಯೆ ಉಂಟಾಗಿದೆ. ಮಂಗಳವಾರ ಬಂದ ನೆರೆಯಿಂದಾಗಿ ಅನೇಕ ಮನೆ ಮತ್ತು ಕೃಷಿ ಭೂಮಿ ಜಲಾವೃತ್ತವಾಗಿದ್ದು ಪಟ್ಟಣ ಪಂಚಾಯತ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಾಕ್ಷಿಯಾಗಿದ್ದಾರೆ.

ಇನ್ನೊಂದು ದೊಡ್ಡ ಆತಂಕವೇನೆಂದರೆ ಕೋಟ ಸೈಬ್ರಕಟ್ಟೆ ರಸ್ತೆಯ ಬನ್ನಾಡಿಯಲ್ಲಿ ಮಂಗಳವಾರ ರಸ್ತೆ ಸಂಪರ್ಕ ಬಂದ್ ಮಾಡುವ ಮಟ್ಟದಲ್ಲಿ ನೀರು ಹರಿಯುತ್ತಿತ್ತು. ಈಗಾಗಲೇ ಅಲ್ಲಿ ಕಿರು ಸೇತುವೆ ನಿರ್ಮಾಣವಾಗುತ್ತಿದೆ. ಅದು ಮುಂದಿನ ವರ್ಷ ಪೂರ್ಣಗೊಂಡು ಅದರ ಮೂಲಕ ನೀರು ಬಂದರೆ ಈಗ ಬರುವ ನೀರಿನ ಪ್ರಮಾಣದ 5 ಪಟ್ಟು ಹೆಚ್ಚಾಗಲಿದೆ. ಬನ್ನಾಡಿ, ಕಾವಡಿ ಪ್ರದೇಶಗಳಿಂದಲೂ ಹರಿವ ನೀರು ಈ ಮೋರಿಯ ಮೂಲಕ ಚಿತ್ರಪಾಡಿ ಬಯಲಿಗೆ ಸೇರಲಿದೆ. ಆಗ ಪರಿಸ್ಥಿತಿ ಇನ್ನಷ್ಟು ಘೋರವಾಗುತ್ತದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ನೀರು ಚಿತ್ರಪಾಡಿ ಮತ್ತು ಕಾರ್ಕಡ ಬೈಲಿಗೆ ನುಗ್ಗಿದಲ್ಲಿ ಅದು ಉಂಟುಮಾಡುವ ಹಾನಿಯ ಪ್ರಮಾಣ ಬಲು ದೊಡ್ಡದೇ ಆಗಿರುತ್ತದೆ. ಮುಂದೆ ನಡೆಯುವ ಅನಾಹುತದ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯತ್ ಮತ್ತು ಕಂದಾಯ ಇಲಾಖೆಯು ಸಂಬಂಧಪಟ್ಟ ಇಲಾಖೆಗೆ ಕ್ರಮ ಕೈಗೊಳ್ಳಲು ವರದಿ ನೀಡಬೇಕು. ಕಾನೂನಿನ ಅಡಿಯಲ್ಲಿ ಸಂಬಂಧಪಟ್ಟ ಇಲಾಖೆಯು ಆದಷ್ಟು ಬೇಗ ಕಾರ್ಯಸೂಚಿ ರಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿ ಚಿತ್ರಪಾಡಿ ಮತ್ತು ಕಾರ್ಕಡ ಬಡಾಹೋಳಿ ರೈತರು ಹಾಗೂ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ಎಡೆಬಿಡದೆ ಸುರಿವ ಮಳೆಯಿಂದಾಗಿ ಚಿತ್ರಪಾಡಿ ಪರಿಸರದ ಜಾನುವಾರುಗಳೂ ಸಂಕಷ್ಟಕ್ಕೆ ಸಿಲುಕಿವೆ. ಅವನ್ನು ತುಂಬಿದ ನೆರೆ ನೀರಿನಲ್ಲಿ ಸ್ಥಳಾಂತರಿಸುವುದು ಅಸಾಧ್ಯ ಎಂದು ಸ್ಥಳೀಯ ನಿವಾಸಿ ರಮೇಶ್ ಮೆಂಡನ್ ಹೇಳುತ್ತಾರೆ. ಸದ್ಯದಲ್ಲಿ ಮಳೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಅಂತೆಯೇ ನೆರೆ ಇಳಿಯುವುದೂ ಇಲ್ಲ. ಸಂಬಂಧಿತ ಇಲಾಖೆ ಮತ್ತು ಸಾಲಿಗ್ರಾಮ ಪ. ಪಂ. ತಾತ್ಕಾಲಿಕ ಪರಿಹಾರ ಕ್ರಮಗಳನ್ನಾದರೂ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಪ್ರತಿಭಟನೆ :- ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಸೆಳೆಯುವನಿಟ್ಟಿನಲ್ಲಿ ಜು.20 ರಂದು ಬೆಳಗ್ಗೆ 10 ಗಂಟೆಗೆ ಕಾರ್ಕಡದಲ್ಲಿ ಜಲಾವೃತವಾದ ಕೃಷಿಜಮೀನಿನ ಸಮೀಪದಲ್ಲೇ ಸಾಂಕೇತಿಕ ಪ್ರತಿಭಟನೆ ನಡೆಸಲಿದ್ದೇವೆ. ಮುಂದಿನ ಹಂತದಲ್ಲಿಹೆಚ್ಚಿನ ಹೋರಾಟ ನಡೆಸಲಿದ್ದೇವೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಮೇಶ್ ಮೆಂಡನ್, ಪರಮೇಶ್ವರ ಭಟ್, ಕೇಶವ ನೈರಿ, ಉಮೇಶ ಹೆಬ್ಬಾರ್, ಶಿವರಾಮ್ ಕಾರಂತ್, ಚಂದ್ರ ಕಾರ್ಕಡ, ಶ್ರೀನಿವಾಸ ಕಾರಂತ್, ಸುರೇಶ್ ಮೆಂಡನ್ ಇದ್ದರು