ಡೈಲಿ ವಾರ್ತೆ: 19/ಜುಲೈ /2024

ಬಿಜೆಪಿ ಅವಧಿಯಲ್ಲಿ 21 ಹಗರಣ ನಡೆದಿದೆ: ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ ಸಿಎಂ

ಬೆಂಗಳೂರು: ಬಿಜೆಪಿ ಅವಧಿಯಲ್ಲಿ 21 ಹಗರಣಗಳು ನಡೆದಿವೆ ಎಂದು ಆರೋಪಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸಭೆ ಕಲಾಪದಲ್ಲಿ 21 ಹಗರಣಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ವಿಧಾನಸಭೆಯ ಕಲಾಪದಲ್ಲಿಂದು ಮುಡಾ ಹಾಗೂ ವಾಲ್ಮೀಕಿ ನಿಗಮದಲ್ಲಿನ ಹಗರಣ ವಿರುದ್ಧ ವಿಪಕ್ಷಗಳ ಹೋರಾಟ ತೀವ್ರಗೊಂಡಿತ್ತು. ಬಿಜೆಪಿ-ಜೆಡಿಎಸ್‌ನಿಂದ ಸದನದಲ್ಲಿ ಪ್ರತಿಭಟನೆ ಮುಂದುವರುದು, ಸದನದ ಬಾವಿಗಿಳಿದು ದೋಸ್ತಿ ನಾಯಕರು ಪ್ರತಿಭಟನೆ ನಡೆಸಿದರು. ಬಳಿಕ ವಾಲ್ಮೀಕಿ ನಿಗಮದ ಹಗರಣ ಚರ್ಚೆ ವೇಳೆ ಉತ್ತರ ನೀಡಲು ಮುಂದಾದ ಸಿಎಂ ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಪಟ್ಟಿ ಬಿಡುಗಡೆ ಮಾಡಿದರು.

ವಿಪಕ್ಷಗಳ ಗದ್ದಲದ ನಡುವೆಯೂ 21 ಹಗರಣಗಳ ಪಟ್ಟಿಯನ್ನ ಸದನದಲ್ಲಿ ಓದಿದರು. ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್‌. ಅಶೋಕ್‌ ಸೇರಿದಂತೆ ಅನೇಕ ಬಿಜೆಪಿ ನಾಯಕರ ಹೆಸರುಗಳನ್ನು ಹಗರಣ ಪಟ್ಟಿಯಲ್ಲಿ ಪ್ರಸ್ತಾಪಿಸಿದರು.

ಇದೇ ವೇಳೆ ಬೊಮ್ಮಾಯಿ, ಯಡಿಯೂರಪ್ಪ ಕಾಲದಲ್ಲಿ ಹಗರಣಗಳು ನಡೆದಿವೆ. ಭ್ರಷ್ಟಾಚಾರ ಪಿತಾಮಹರೇ ಬಿಜೆಪಿಗರು. ನಮ್ಮ ಹಗರಣಗಳು ಬಿಚ್ಚಬಾರದು ಎಂದು ಇಲ್ಲಿ ಗಲಾಟೆ ಮಾಡ್ತಿದ್ದಾರೆ? ನನ್ನ ರಾಜಕೀಯ ಜೀವನದಲ್ಲೇ ಇಷ್ಟು ಕೆಟ್ಟದಾಗಿ ಪ್ರತಿಪಕ್ಷಗಳು ನಡೆದುಕೊಂಡಿಲ್ಲ. ಕೇಂದ್ರ ಹಾಗೂ ಆರ್‌ಎಸ್‌ಎಸ್‌ ಸೂಚನೆಯಿಂದ ಈ ರೀತಿ ಮಾಡ್ತಿದ್ದಾರೆ. ಕೇವಲ ಪ್ರಚಾರಕ್ಕಾಗಿ ಈ ರೀತಿ ಗಲಾಟೆ ಮಾಡ್ತಿದ್ದಾರೆ. ರಾಜ್ಯದ ಜನರ ಬಗ್ಗೆ ಚರ್ಚೆ ಮಾಡುವ ಆಸಕ್ತಿ ಇವರಿಗಿಲ್ಲ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಪ್ರತಿಪಕ್ಷಗಳ ವಿರುದ್ಧ ಅಬ್ಬರಿಸಿ ಬೊಬ್ಬರಿದರು.

ಸಿಎಂ ಬಿಡುಗಡೆ ಮಾಡಿದ ಹಗರಣಗಳ ಪಟ್ಟಿ:

  • ಎಪಿಎಂಸಿ ಹಗರಣ – 2020-21 – 47.16 ಕೋಟಿ ರೂ.
  • ಭೋವಿ ಅಭಿವೃದ್ಧಿ ನಿಗಮ – 2021-22 – 87.00 ಕೋಟಿ ರೂ.ಗಿಂತಲೂ ಹೆಚ್ಚು
  • ದೇವರಾಜ ಅರಸು ಟ್ರಕ್ ಟರ್ಮಿನಲ್ – 2022-23 – ಶ್ರೀರಾಮುಲು 50.00 ಕೋಟಿ ರೂ.ಗಿಂತ ಅಧಿಕ
  • ಗಂಗಾ ಕಲ್ಯಾಣ ಯೋಜನೆ – (ಅಂಬೇಡ್ಕರ್, ಭೋವಿ, ಆದಿಜಾಂಬವ, ಮುಂತಾದ ನಿಗಮಗಳು) 2021-22 – 430.00 ಕೋಟಿ ರೂ.ಗಿಂತ ಅಧಿಕ
  • ಪ್ರವಾಸೋದ್ಯಮ ಇಲಾಖೆ 2021-22 – ಸಿ.ಪಿ ಯೋಗೇಶ್ವರ್ 2.47 ಕೋಟಿ ರೂ.
  • ಕಿಯೋನಿಕ್ಸ್ ಹಗರಣ 2019 ರಿಂದ 2023 – ಅಶ್ವತ್ಥ್ನಾರಾಯಣ – 500 ಕೋಟಿ ರೂ. – ಸಿ.ಎ.ಜಿ. ವರದಿಯಲ್ಲಿ ಉಲ್ಲೇಖ
  • ಕೋವಿಡ್ ಹಗರಣ – 2019-20 – ಕೆ.ಸುಧಾಕರ್ – 40,000 ಕೋಟಿಗೂ ಹೆಚ್ಚು ಹಗರಣ
  • 40% ಹಗರಣ – 2019-20 – 2,000 ಕೋಟಿ ರೂ.ಗಿಂತ ಅಧಿಕ ಹಗರಣ
  • ಪಿಎಸ್‌ಐ ಮತ್ತು ಇತರೆ ನೇಮಕಾತಿ – 2019-20 ಹಾಗೂ 2022-23 – ನೂರಾರು ಕೋಟಿ ರೂ.
  • ಪರಶುರಾಮ ಥೀಮ್ ಪಾರ್ಕ್ ಹಗರಣ – 2022-23 – ವಿ. ಸುನೀಲ್‌ಕುಮಾರ್ – 11.00 ಕೋಟಿಗೂ ಹೆಚ್ಚು
  • ಬಿಟ್‌ಕಾಯಿನ್ ಹಗರಣ – 2021 ರಿಂದ 2023 – ಸಾವಿರಾರು ಕೋಟಿ ರೂ. ಹಗರಣ
  • ಯಡಿಯೂರಪ್ಪ ನವರ ಅಕ್ರಮ ಆಸ್ತಿ – 2021 – 750 ಕೋಟಿ ರೂ.ಗಿಂತ ಹೆಚ್ಚು
  • ಯಡಿಯೂರಪ್ಪ ಮತ್ತು ವಿಜಯೇಂದ್ರ ಕುಟುಂಬದ ಆದಾಯ ಮೀರಿದ ಆಸ್ತಿ ಪ್ರಕರಣ – ನೂರಾರು ಕೋಟಿ
  • ಯಡಿಯೂರಪ್ಪ ಅವರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಈಶ್ವರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು.
  • ಬಿಜೆಪಿ ಸರ್ಕಾರದ ಅಬಕಾರಿ ಸಚಿವರ ಹಗರಣದ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದಿದ್ದರು – ನೂರಾರು ಕೋಟಿ ರೂ. ಅಬಕಾರಿ
  • ಕೆಕೆಆರ್‌ಡಿಬಿ ಹಗರಣ – 2019-20 ರಿಂದ ಏಪ್ರಿಲ್-2023 – ಪಿ. ಮುನಿರತ್ನ 200 ಕೋಟಿಗೂ ಹೆಚ್ಚು (ದತ್ತಾತ್ರೇಯ ಪಾಟೀಲರೇವೂರ ನಿಗಮದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಹಗರಣ)
  • ಕಂದಾಯ ಇಲಾಖೆಯ ಹಗರಣ 2019-20 ರಿಂದ ಏಪ್ರಿಲ್-2023 – ಅಶೋಕ್ ಮೇಲೆ ಸುಪ್ರೀಂ ಕೋರ್ಟ್ನಲ್ಲಿ ಕೇಸ್ ಇದೆ
  • ಕೃಷಿ ಇಲಾಖೆಯಲ್ಲಿ 2021 ರಿಂದ 2023 – ಬಿ.ಸಿ.ಪಾಟೀಲ್ – ಕೃಷಿ ಇಲಾಖೆಯ ನೌಕರರೇ ಲಂಚ ವಸೂಲಿ ಮಾಡುತ್ತಿದ್ದ ಕುರಿತು
    ರಾಜ್ಯಪಾಲರಿಗೆ ಪತ್ರ ಬರೆದಿದ್ದರು.
  • ಮೊಟ್ಟೆ ಹಗರಣ – 2019 ರಿಂದ 2021 – ಶಶಿಕಲಾ ಜೊಲ್ಲೆ ಪರಣ್ಣ ಮುನವಳ್ಳಿ ಕೂಡ ಭಾಗಿಯಾಗಿದ್ದರು.
  • ಕೆಐಎಡಿಬಿ 2008 ರಿಂದ 2013 – ಕಟ್ಟಾ ಸುಬ್ರಮಣ್ಯ ನಾಯ್ಡು, ಮುರುಗೇಶ ನಿರಾಣಿ, ಮುಂತಾದವರು ಭಾಗಿಯಾಗಿದ್ದ ಬೃಹತ್ ಹಗರಣ ಕಾಂಡದ ಬಿಸಿ ಇನ್ನೂ ಆರಿಲ್ಲ.
  • ಗಣಿ ಹಗರಣ, ಬಿಡಿಎ ಮತ್ತು ಕೆಐಎಡಿಬಿ ಡಿನೋಟಿಫಿಕೇಶನ್ ಹಗರಣ – ಬಿಎಸ್‌ವೈ ಸೇರಿ ಹಲವು ಸಚಿವರಗಳು ಜೈಲಿಗೆ ಹೋಗಿದ್ದಾರೆ.
  • ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಬೃಹತ್ ಹಗರಣ – ಸಾವಿರಾರು ಕೋಟಿ ಹಗರಣ – ಐಟಿ, ಇಡಿ, ಸಿಬಿಐ ತನಿಖೆ ಇದುವರೆಗೆ ಯಾರನ್ನೂ ಬಂಧಿಸುವ ಕೆಲಸ ಆಗಿಲ್ಲ.

ಬಿಜೆಪಿ ಅವಧಿಯಲ್ಲಿ ಲೆಕ್ಕ ಹಾಕಲಾಗದಷ್ಟು ಹಗರಣಗಳು ಬಯಲಾಗುತ್ತಲೇ ಇವೆ. ಈ ಹಗರಣಗಳ ಕುರಿತು ವಿವಿಧ ತನಿಖೆ ನಡೆಯುತ್ತಿವೆ. ಭ್ರಷ್ಟರು ಹಾಗೂ ದುರುಳರು ಜೈಲಿಗೆ ಹೋಗುವ ದಿನಗಳ ದೂರವಿಲ್ಲ ಎಂದು ಅವರು ಗುಡುಗಿದರು.