ಡೈಲಿ ವಾರ್ತೆ: 19/ಜುಲೈ /2024
ಬಂಟ್ವಾಳ : ತಾಲೂಕಿನಾದ್ಯಂತ ವ್ಯಾಪಕ ಮಳೆ, ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆ, ಮನೆಗಳಿಗೆ ನುಗ್ಗಿದ ನೀರು
ಬಂಟ್ವಾಳ : ತಾಲೂಕಿನಾದ್ಯಂತ ವ್ಯಾಪಕವಾಗಿ ಧಾರಾಕಾರ ಮಳೆಯಾಗುತ್ತಿದ್ದು ಬಂಟ್ವಾಳ ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು ಶುಕ್ರವಾರ 8.6 ಮೀಟರ್ ನಲ್ಲಿ ಹರಿಯುತ್ತಿದೆ.
ಬಂಟ್ವಾಳದ ತಗ್ಗು ಪ್ರದೇಶವಾದ ಪಾಣೆಮಂಗಳೂರು ಆಲಡ್ಕ ಮೊದಲಾದೆಡೆ ಮನೆಗಳಿಗೆ ನೀರು ನುಗ್ಗಿದೆ.
ಮುಂಜಾಗ್ರತಾ ಕ್ರಮವಾಗಿ ಆಲಡ್ಕ ಪರಿಸರದ 10 ಕುಟುಂಬಗಳನ್ನು ತೆರವುಗೊಳಿಸಲಾಗಿದ್ದು ಯಾವುದೇ ಅಪಾಯ ಸಂಭವಿಸಿಲ್ಲ. ತಾಲೂಕಿನ ವಿವಿಧೆಡೆ ತೋಟಗಳಲ್ಲಿ ನೀರು ತುಂಬಿಕೊಂಡಿದ್ದು ಕೃಷಿ ಹಾನಿ ಸಂಭವಿಸಿದೆ. ಇತಿಹಾಸ ಪ್ರಸಿದ್ಧ ಅಜಿಲಮೊಗರು ಜುಮಾ ಮಸೀದಿ ವಠಾರದಲ್ಲಿ ನೀರು ಆವರಿಸಿದೆ.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೆರೆ ಪೀಡಿತ ಪ್ರದೇಶಗಳಾದ ಪಾಣೆಮಂಗಳೂರು ಆಲಡ್ಕಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ, ಇಲ್ಲಿನ ತಾಲೂಕು ಆಡಳಿತ ಹಾಗೂ ಪೋಲೀಸರ ಜೊತೆಗೆ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನೀರು ನುಗ್ಗುವ ಲಕ್ಷಗಳು ಕಂಡು ಬರುವ ಮನೆಗಳನ್ನು ಹಗಲು ಹೊತ್ತಿನಲ್ಲಿಯೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭ ಅಲ್ಲಿಗೆ ಬಂದಿದ್ದ ಮಕ್ಕಳ ಕೈ ಕುಲುಕಿಸಿ ಮಾತನಾಡಿಸಿದ ಜಿಲ್ಲಾಧಿಕಾರಿಯವರು ರಜೆ ನೀಡಿರುವುದು ಮನೆಯಲ್ಲಿ ಸುರಕ್ಷಿತವಾಗಿ ಕುಳಿತುಕೊಳ್ಳುವ ಉದ್ದೇಶದಿಂದ. ಹಾಗಾಗಿ ನೀವು ನೀರಿನ ಹತ್ತಿರ ಕ್ಕೆ ನದಿ ತೀರಕ್ಕೆ ತೆರಳದೆ ಮನೆಯಲ್ಲಿ ಜಾಗೃತೆವಹಿಸಿ ಎಂದು ಬುದ್ದಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಎಸಿ, ಹರ್ಷವರ್ದನ್, ಎಡಿಸಿ ಜಿ.ಸಂತೋಷ್ ಕುಮಾರ್, ಎಸ್ಪಿ.ಯತೀಶ್ ಎನ್, ಜಿ.ಪಂ.ಸಿಒ ಆನಂದ, ಇಒ. ಮಹೇಶ್ ಹೊಳ್ಳ, ಸ್ಥಳೀಯ ಪುರಸಭಾ ಸದಸ್ಯ ಅಬುಬಕ್ಕರ್ ಸಿದ್ದೀಕ್ ಗುಡ್ಡೆ ಅಂಗಡಿ ಬಂಟ್ವಾಳ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಆನಂತ ಪದ್ಮನಾಭ, ಎಸ್ಐ. ರಾಮಕೃಷ್ಣ, ಗ್ರಾಮಾಂತರ ಎಸ್ಐ. ಹರೀಶ್ , ಕಂದಾಯ ನಿರೀಕ್ಷಕರಾದ ಜನಾರ್ಧನ ಬಂಟ್ವಾಳ ವಿಜಯ್ ಪಾಣೆಮಂಗಳೂರು, ಗ್ರಾಮ ಆಡಳಿತ ಅಧಿಕಾರಿಗಳಾದ ಪ್ರಕಾಶ್, ಪ್ರಶಾಂತ್ ಮೊದಲಾದವರು ಉಪಸ್ಥಿತರಿದ್ದರು.