ಡೈಲಿ ವಾರ್ತೆ: 31/ಜುಲೈ /2024

ಹಮಾಸ್‌ ಮುಖ್ಯಸ್ಥ ಇಸ್ಮಾಯಿಲ್‌ ಹತ್ಯೆ- ಪ್ರತೀಕಾರ ತೀರಿಸಿಕೊಂಡ ಇಸ್ರೇಲ್‌!

ಟೆಲ್ ಅವಿವ್: ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿ ಹಮಾಸ್‌ನ ಪೊಲಿಟಿಕಲ್ ಬ್ಯೂರೋ ಮುಖ್ಯಸ್ಥ ಹನಿಯೆಹ್ ಅವರ ಹತ್ಯೆಯಾಗಿದೆ. ಇದೇ ವೇಳೆ ಅವರ ಅಂಗರಕ್ಷಕರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಹೇಳಿಕೆ ಬಿಡುಗಡೆಮಾಡಿರುವುದಾಗಿ ವರದಿಯಾಗಿದೆ.

ಹಮಾಸ್ ಮುಖ್ಯಸ್ಥ ಇಸ್ಮಾಯಿಲ್ ಹನಿಯಾ ಇರಾನ್‌ನ ಚುನಾಯಿತ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಟೆಹ್ರಾನ್‌ನಲ್ಲಿದ್ದರು. ಅವರೊಂದಿಗೆ ಓರ್ವ ಅಂಗರಕ್ಷಕರೂ ಇದ್ದರು. ಕಾರ್ಯಕ್ರಮದ ನಂತರ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಹಮಾಸ್‌ ಹೇಳಿಕೆಯಲ್ಲಿ ತಿಳಿಸಿದೆ. ದಾಳಿಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ಫಲಿತಾಂಶವನ್ನು ನಂತರ ಪ್ರಕಟಿಸುವುದಾಗಿ ಹೇಳಿದೆ ಎಂದು ತಿಳಿದುಬಂದಿದೆ.

ಕಳೆದ ಅಕ್ಟೋಬರ್ 7ರ ಇಸ್ರೇಲ್‌ ಮೇಲೆ ನಡೆದ ದಾಳಿಯ ನಂತರ ಇಸ್ಮಾಯಿಲ್ ಹನಿಯೆಹ್ ಅವರನ್ನು ಕೊಂದು ಹಮಾಸ್ ಗುಂಪನ್ನು ನಾಶಮಾಡುವುದಾಗಿ ಇಸ್ರೇಲ್ ಪ್ರತಿಜ್ಞೆ ಮಾಡಿತ್ತು. ಇದರ ಪರಿಣಾಮವಾಗಿ 1,195 ಜನರು ಸಾವನ್ನಪ್ಪಿದರು, ಹೆಚ್ಚಾಗಿ ನಾಗರಿಕರು ಮೃತಪಟ್ಟಿದ್ದರು. ಇದೀಗ ಇಸ್ರೇಲ್‌ ದಾಳಿಯಲ್ಲಿ ಹಮಾಸ್‌ ಮುಖ್ಯಸ್ಥನನ್ನ ಹತ್ಯೆಗೈದಿದ್ದು ಸೇಡು ತೀರಿಸಿಕೊಂಡಿದೆ ಎಂದು ವರದಿಗಳು ಉಲ್ಲೇಖಿಸಿವೆ. ಹಮಾಸ್‌ ನಾಯಕನ ಹತ್ಯೆಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ತೀವ್ರ ಸಂತಾಪ ಸೂಚಿಸಿದೆ.

ದಾಳಿಯಲ್ಲಿ ಸತ್ತಿದ್ದೆಷ್ಟು ಮಂದಿ?
ಇಸ್ರೇಲ್‌-ಹಮಾಸ್‌ ನಡುವೆ ನಡೆದ ಭೀಕರ ದಾಳಿಯಲ್ಲಿ ಈವರೆಗೆ 40,000ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದಾರೆ. ಈ ಪೈಕಿ 39,145 ಮಂದಿ ಪ್ಯಾಲೆಸ್ತೀನಿಯರು ಹಾಗೂ 1,478 ಮಂದಿ ಇಸ್ರೇಲಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. 108 ಪತ್ರಕರ್ತರು ತಮ್ಮ ಜೀವ ತೆತ್ತಿದ್ದಾರೆ ಎಂದು ಹೇಳಲಾಗಿದೆ.