ಡೈಲಿ ವಾರ್ತೆ: 25/ಆಗಸ್ಟ್/2024

ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ನೂತನ ಕಟ್ಟಡ “ಬಾಂಡ್ಯ ಶ್ರೀ ಕೆ. ಸುಧಾಕರ ಶೆಟ್ಟಿ ಸಹಕಾರಿ ಸದನ” ಲೋಕಾರ್ಪಣೆ

ಕುಂದಾಪುರ: ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ನೂತನ ಕಟ್ಟಡ ‘ಬಾಂಡ್ಯ ಶ್ರೀ ಕೆ. ಸುಧಾಕರ ಶೆಟ್ಟಿ ಸಹಕಾರಿ ಸದನ’ವನ್ನು ಆ. 24 ರಂದು ಶನಿವಾರ ಉದ್ಘಾಟನೆಗೊಂಡಿತು.


ಈ ಕಟ್ಟಡ ಉದ್ಘಾಟನೆಯನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಉದ್ಘಾಟಿಸಿದರು. ಅವರು ಸಮ್ಮಾನ ಸ್ವೀಕರಿಸಿ ಮಾತನಾಡಿ ಕರ್ಕುಂಜೆ ಸಹಕಾರಿ ಸಂಘವು 25 ವರ್ಷ ಪೂರೈಸುತ್ತಿದ್ದಂತೆಯೇ ಈಗ ಸ್ವಂತ ನೂತನ ಕಟ್ಟಡವನ್ನು ಹೊಂದಿದ್ದು. ಇದರೊಂದಿಗೆ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಸಹಕಾರಿ ಸಂಘಗಳು ಸ್ವಂತ ಕಟ್ಟಡವನ್ನು ಹೊಂದಿದೆ. ಆ ಮೂಲಕ ನಮ್ಮ ಕರಾವಳಿಯ ಸಹಕಾರಿ ಸಂಘಗಳು ರಾಜ್ಯಕ್ಕೆ ಮಾದರಿಯಾಗಿವೆ.
ಈ ಎಲ್ಲ ಸಹಕಾರಿಗಳು ಆರ್ಥಿಕವಾಗಿಯೂ ಸದೃಢರಾಗಿದ್ದು, ಶೇ.100 ರಷ್ಟು ಸಾಲ ಮರು ಪಾವತಿಯೂ ಆಗುತ್ತಿದೆ ಎಂದು ಹೇಳಿದರು.
ಕರ್ಕುಂಜೆ ಸಹಕಾರಿ ನೂತನ ಕಟ್ಟಡದಲ್ಲಿ ಬ್ಯಾಂಕಿಂಗ್, ಆಡಳಿತ ಕಚೇರಿ, ಸದಸ್ಯರ ಶುಭ ಸಮಾರಂಭಗಳಿಗೆ ಅನುಕೂಲವಾದಂತಹ ಹಾಲ್, ಹವಾನಿಯಂತ್ರಿತ ವ್ಯವಸ್ಥೆ, ಲಿಫ್ಟ್ ಸೌಲಭ್ಯ ಹೀಗೆ ಈ ಎಲ್ಲವೂ ಇದೆ. ಈ ಸಹಕಾರಿ ಸದನ ಪರಿಪೂರ್ಣತೆ ಕಂಡಿದೆ. ಅಲ್ಲದೆ ಅಧ್ಯಕ್ಷರಾದ ಸುಧಾಕರ ಶೆಟ್ರು ಈ ಸಂಘಕ್ಕೆ ಹೊಸ ಮೆರುಗನ್ನು ತಂದಿದ್ದಾರೆ ಎಂದ ಅವರು, ಡಿಸಿಸಿ ಬ್ಯಾಂಕ್ ವತಿಯಿಂದ ಈ ಸಂಘಕ್ಕೆ 15 ಲಕ್ಷ ರೂ. ನೆರವನ್ನು ನೀಡುವುದಾಗಿ ಘೋಷಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಬಿ ಅಪ್ಪಣ್ಣ ಹೆಗ್ಡೆ ಮಾತನಾಡಿ ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಬೆಳ್ಳಿ ಹಬ್ಬದ ದ್ಯೋತಕವಾಗಿ ಈ ಕಟ್ಟಡ ನಿರ್ಮಾಣಗೊಂಡಿದೆ. ಗ್ರಾಮೀಣ ಭಾಗದ ಮಾದರಿ ಸಂಸ್ಥೆಯಾಗಿ ಈ ಸಂಘ ಬೆಳೆದಿದೆ. ಸರಕಾರದ ಸವಲತ್ತುಗಳನ್ನು ರೈತರಿಗೆ ತಲುಪಿಸುವಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದು ಎಂದರು.

ಬ್ಯಾಂಕಿಂಗ್ ವಿಭಾಗ ಉದ್ಘಾಟಿಸಿದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ ಬಾಂಡ್ಯ ಸುಧಾಕರ ಶೆಟ್ರು ಈ ಕಟ್ಟಡಕ್ಕೆ ತನ್ನ ಸ್ವಂತ ಜಾಗವನ್ನೇ ನೀಡುವ ಮೂಲಕ ಹೃದಯ ಶ್ರೀಮಂತಿಕೆಯನ್ನು ಮೆರೆದಿದ್ದಾರೆ. ಈ ಕಟ್ಟಡವು ಸುಸಜ್ಜಿತವಾಗಿದ್ದು, ಬರುವಂತಹ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಎಲ್ಲ ರೀತಿಯ ವ್ಯವಸ್ಥೆಯೂ ಇಲ್ಲಿದೆ. ಮುಂದೆ ನಬಾರ್ಡ್ ಯೋಜನೆಯಡಿ ದೊಡ್ಡ ಮಟ್ಟದ ಗೋದಾಮು ಮಾಡುವ ಮಹಾದಾಸೆ ಹೊಂದಿರುವುದು ಶ್ಲಾಘನೀಯ ಎಂದು ಹೇಳಿದರು.

ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಭದ್ರತಾ ಕೊಠಡಿಯನ್ನು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಜಯರಾಮ ರೈ ದುರ್ಗಾಪರಮೇಶ್ವರಿ ಭೋಜನ ಭೂಮಿಯನ್ನು, ಸಹಕಾರಿ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಗೋದಾಮನ್ನು ಉದ್ಘಾಟಿಸಿದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಸುಕನ್ಯಾ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ಕೃಷಿ ಉತ್ಪನ್ನ ಮಾರಾಟ ಸಹಕಾರಿ ಸಂಘದ ಅಧ್ಯಕ್ಷ ಹೆಚ್. ಹರಿಪ್ರಸಾದ್ ಶೆಟ್ಟಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಮಾಜಿ ನಿರ್ದೇಶಕ ಕೆ. ಬಾಂಡ್ಯ ಸುಬ್ಬಣ್ಣ ಶೆಟ್ಟಿ, ಕರ್ಕುಂಜೆ ಗ್ರಾ.ಪಂ. ಅಧ್ಯಕ್ಷ ಬಿಜ್ರಿ ರಾಜೀವ ಶೆಟ್ಟಿ, ಆಜ್ರಿ ಗ್ರಾ.ಪಂ.ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಗುಲ್ವಾಡಿ ಗ್ರಾ.ಪಂ. ಅಧ್ಯಕ್ಷೆ ಶೋಭಾ ಎಚ್., ಸಂಘದ ಮುಖ್ಯ ಕಾರ್‍ಯನಿರ್ವಹಣಾಽಕಾರಿ ಸುಭಾಶ್ಚಂದ್ರ ಶೆಟ್ಟಿ, ನಿರ್ದೇಶಕರು, ಮತ್ತಿತರರು ಉಪಸ್ಥಿತರಿದ್ದರು.

ಕರ್ಕುಂಜೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಪ್ರಸ್ತಾವಿಸಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.
ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.
ಸಂಸ್ಥೆ ಸಿಬ್ಬಂದಿ ಅನುಷಾ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ಬಡಗುತಿಟ್ಟಿನ ಹೆಸರಾಂತ ಕಲಾವಿದರ ಒಗ್ಗೂಡುವಿಕೆಯಲ್ಲಿ ಅದ್ದೂರಿ ನಾಗಶ್ರೀ ಯಕ್ಷಗಾನ ಪ್ರದರ್ಶನಗೊಂಡಿತು.