ಡೈಲಿ ವಾರ್ತೆ: 25/ಆಗಸ್ಟ್/2024
ಬೆಳ್ತಂಗಡಿ: ನಿವೃತ್ತ ಶಿಕ್ಷಕನ ಬರ್ಬರ ಕೊಲೆ ಪ್ರಕರಣ – ಅಳಿಯ, ಮೊಮ್ಮಗನ ಬಂಧನ
ಧರ್ಮಸ್ಥಳ: ನಿವೃತ್ತ ಶಿಕ್ಷಕ ಕೊಲೆ ಪ್ರಕರಣ ಸಂಬಂಧಿಸಿದಂತೆ ಮಗಳಿಗೆ ಆಸ್ತಿ- ಜಾಗ ಪಾಲು ಮಾಡಿ ಕೊಡದೇ ಇರುವ ಕಾರಣದಿಂದ ಕುಟುಂಬ ಸದಸ್ಯರಾದ ಅಳಿಯ ಮತ್ತು ಮೊಮ್ಮಗ ಸೇರಿ ಬಾಲಕೃಷ್ಣ ಭಟ್ ಅವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಹಂತಕರಿಬ್ಬರನ್ನು ಧರ್ಮಸ್ಥಳ ಪೊಲೀಸರು ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.
ಧರ್ಮಸ್ಥಳ ಪೊಲೀಸರು ಮೊಬೈಲ್, ಸಿಸಿ ಕ್ಯಾಮರ ಹಾಗೂ ವಿವಿಧ ಟೆಕ್ನಿಕಲ್ ಅಧಾರದಲ್ಲಿ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಲೆಯಾದ ಬಾಲಕೃಷ್ಣ ಭಟ್(83) ಅವರ ಮಗಳ ಗಂಡ(ಆಳಿಯ) ರಾಘವೇಂದ್ರ ಕೆಧಿಲಾಯ(53) ಮತ್ತು ಮಗಳ ಮಗ (ಮೊಮ್ಮಗ) ಮುರುಳಿಕೃಷ್ಣ(20) ಎಂಬಾತನನ್ನು ಆ.24 ರಂದು ಕಾಸರಗೋಡು ಮನೆಯಲ್ಲಿ ಬಂಧಿಸಿದ್ದಾರೆ.
ಮೊದಲಿಗೆ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಬಂದು ವಿಚಾರಣೆ ನಡೆಸಿದಾಗ ಬಾಲಕೃಷ್ಣ ಭಟ್ ಅವರನ್ನು ಆಸ್ತಿ ಹಾಗೂ ಚಿನ್ನಾಭರಣಕ್ಕಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಳಿಯನ ಜೊತೆ ಬಂದಿದ್ದ ಮೊಮ್ಮಗ ಮೊದಲು ಮಾರಕಾಸ್ತ್ರದಿಂದ ಕೊಲೆ ಮಾಡಿರುವುದಾಗಿ ಬಾಯಿಬಿಟ್ಟಿದ್ದು ಆರೋಪಿಗಳಿಬ್ಬರನ್ನು ಕೋರ್ಟ್ ರಜೆ ಇರುವ ಕಾರಣದಿಂದ ಬೆಳ್ತಂಗಡಿ ನ್ಯಾಯಾಧೀಶರ ಮನೆಗೆ ಆ.24 ರಂದು ಸಂಜೆ ಹಾಜರುಪಡಿಸಿದ್ದು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆ.27 ರಂದು ಧರ್ಮಸ್ಥಳ ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಿದ್ದಾರೆ.
ಮಾರಕಾಸ್ತ್ರದಿಂದ ಕೊಲೆ ಮಾಡಿದ ಮೊಮ್ಮಗ:
ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಅವರ ಜಾಗ ಮತ್ತು ನಾಲ್ಕು ವರ್ಷದ ಹಿಂದೆ ಮೃತಪಟ್ಟಿದ್ದ ಪತ್ನಿ ದಿ.ಯು.ಲೀಲಾ(75) ಅವರ ಚಿನ್ನವನ್ನು ಮಗಳಾದ ವಿಜಯಲಕ್ಷ್ಮಿಗೆ ಪಾಲು ನೀಡದೆ ಅದನ್ನು ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದರು. ಇದೇ ಕಾರಣದಿಂದ ಬೇಸರಗೊಂಡಿದ್ದ ಬಾಲಕೃಷ್ಣ ಭಟ್ ಮಗಳು ವಿಜಯಲಕ್ಷ್ಮಿಯ ಗಂಡ ಕೃಷಿಕ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆಧಿಲಾಯ(53) ಮತ್ತು ಮಗ ಮುರಳಿ ಕೃಷ್ಣ (20) ಹತ್ಯೆ ಮಾಡುವ ಯೋಜನೆ ರೂಪಿಸಿದ್ದಾರೆ. ಅಪ್ಪ-ಮಗ ಸೇರಿಕೊಂಡು ಕಾಸರಗೋಡು ಮನೆಯಿಂದ ಮಾರಕಾಸ್ತ್ರ ರೆಡಿ ಮಾಡಿಕೊಂಡು ನೇರ ವಿಜಯಲಕ್ಷ್ಮಿಯ ಸ್ಕೂಟರ್ನಲ್ಲಿ ರಾಘವೇಂದ್ರ ಕೆಧಿಲಾಯ ಮತ್ತು ಸ್ನೇಹಿತನ ಬೈಕ್ ನಲ್ಲಿ ಮುರುಳಿಕೃಷ್ಣ ಬಂದು ಮಂಗಳೂರಿನಲ್ಲಿ ಬೈಕ್ ನಿಲ್ಲಿಸಿ ಅಲ್ಲಿಂದ ಒಂದು ಸ್ಕೂಟರಿನಲ್ಲಿಯೇ ಅಪ್ಪ-ಮಗ ಬೆಳಾಲಿಗೆ ಬಂದು ಬಾಲಕೃಷ್ಣ ಭಟ್ ಮನೆ ಸೇರಿದ್ದಾರೆ.
ಬಳಿಕ ಮಾವ ಮಾಡಿದ ಊಟ ಮಾಡಿ, ಚಾ ಕುಡಿದು ಮಾತನಾಡುತ್ತಿರುವಾಗಲೇ ಆಯುಧದಿಂದ ಮೊಮ್ಮಗ ಮುರುಳಿಕೃಷ್ಣ ಹಿಂಬದಿಯ ಕುತ್ತಿಗೆಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ತಪ್ಪಿಸಿಕೊಂಡು ಮನೆಯ ಅಂಗಳಕ್ಕೆ ಬಂದಾಗ ಮತ್ತೆ ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಅದಕ್ಕೆ ನಳ್ಳಿ ನೀರಿನ ಕೇಳಗೆ ಹಾಕಿದ್ದ ಹಾಸು ಕಲ್ಲು ತಲೆಯ ಮೇಲೆ ಇಟ್ಟು ಬಳಿಕ ಅಲ್ಲಿಂದ ಕೊಲೆಗಾರ ಅಳಿಯ-ಮೊಮ್ಮಗ ನೇರ ಸ್ಕೂಟರ್ ಮೂಲಕ ಕಾಸರಗೋಡು ಮನೆ ಸೇರಿದ್ದಾರೆ. ಬಾಲಕೃಷ್ಣ ಭಟ್ ಅವರನ್ನು ಪತಿ- ಮಗ ಸೇರಿ ಕೊಲೆ ಮಾಡುವುದು ಅಥವಾ ಕೊಲೆ ಮಾಡಿದ್ದಾರೆ ಎಂದು ಪತ್ನಿ ವಿಜಯಲಕ್ಷ್ಮಿಗೆ ತಿಳಿದಿರಲಿಲ್ಲ. ಧರ್ಮಸ್ಥಳ ಪೊಲೀಸರು ಕಾಸರಗೋಡು ಮನೆಗೆ ಬಂದು ಪತಿ-ಮಗನನ್ನು ವಶಕ್ಕೆ ಪಡೆದ ಬಳಿಕ ಕೊಲೆ ಮಾಡಿದ ರಹಸ್ಯ ಬಯಲಾಗಿದೆ.
ಎರಡನೆ ಕೊಲೆ ಮೀಸ್:
ಬಾಲಕೃಷ್ಣ ಭಟ್ ಜೊತೆ ಕಿರಿಯ ಮಗ ಸುರೇಶ್ ಭಟ್ ನನ್ನು ಕೂಡ ಕೊಲೆ ಮಾಡಲು ಯೋಜನೆ ರೂಪಿಸಿ ಬಂದಿದ್ದರು. ಹಾಗೂ ಬಾಲಕೃಷ್ಣ ಭಟ್ ಕೊಲೆ ಬಳಿಕ ಸುರೇಂದ್ರ ಭಟ್ ಬರುವಿಕೆಗಾಗಿ ಸ್ವಲ್ಪ ಸಮಯ ಮನೆಯಲ್ಲಿ ಕಾದು ಕುಳಿತ್ತಿದ್ದರು. ಆದ್ರೆ ಬಾರದೆ ಇದ್ದಾಗ ಬಾಲಕೃಷ್ಣ ಭಟ್ ಅವರ 50 ಸಾವಿರದ ಎರಡು ಬಾಂಡ್ ಪೇಪರ್ ಹಾಗೂ ಕೆಲವು ದಾಖಲೆಗಳನ್ನು ಕಪಾಟಿನಿಂದ ಹಂತಕರು ತೆಗೆದುಕೊಂಡು ಬಂದ ದಾರಿಯಲ್ಲಿ ವಾಪಸ್ ತಮ್ಮ ಮನೆಗೆ ಸ್ಕೂಟರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರ ವಿಚಾರಣೆಯಲ್ಲಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
ಕೊಲೆಗಾರ ಹಿನ್ನಲೆ:
ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ಗೆ ಒಟ್ಟು ಮೂರು ಜನ ಮಕ್ಕಳು. ಮೊದಲ ಮಗ ಹರೀಶ್ ಭಟ್ ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಎರಡನೇ ಮಗಳು ವಿಜಯಲಕ್ಷ್ಮಿ(49) ಇವರನ್ನು 22 ವರ್ಷದ ಹಿಂದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮುಲ್ಲೇರಿಯಲ್ಲಿ ಕೃಷಿ ಹಾಗೂ ಜ್ಯೋತಿಷ್ಯಿಯಾಗಿರುವ ರಾಘವೇಂದ್ರ ಕೆಧಿಲಾಯ(53) ಇವನಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ ಇವರಲ್ಲಿ ಮೊದಲ ಮಗ ಮುರಳಿಕೃಷ್ಣ(20) ಹಾಗೂ ಪಿಯುಸಿ ಓದುತ್ತಿರುವ ಮಗಳು ಇದ್ದಾರೆ. ಕಿರಿಯ ಮಗ ಸುರೇಶ್ ಭಟ್(48) ಅವಿವಾಹಿತನಾಗಿದ್ದು ಪುತ್ತೂರಿನಲ್ಲಿ ರಿಲಯನ್ಸ್ಸ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸುಳಿವು ನೀಡಿದ ಊಟ ಮಾಡಿ ಬಿಸಾಕಿದ ಬಾಳೆ ಎಳೆ:
ಕೊಲೆ ಬಳಿಕ ಮಂಗಳೂರು ಶ್ವಾನ ದಳ ತಂಡ ಘಟನಾ ಸ್ಥಳಕ್ಕೆ ಬಂದು ಮನೆಯೊಳಗಿಂದ ಆರೋಪಿಗಳ ಸುಳಿವಿಗಾಗಿ ವಾಸನೆ ಹಿಡಿದು ಅಂಗಳ, ಕೊಲೆಯಾಗಿ ಬಿದ್ದ ಜಾಗ ಹಾಗೂ ಊಟ ಮಾಡಿ ಬಾವಿ ಬಳಿ ತೆಂಗಿನ ಬುಡಕ್ಕೆ ಬಿಸಾಕಿದ ಎರಡು ಬಾಳೆ ಎಲೆ ಕಡೆಗೆ ಹೋಗಿ ಸುಳಿವು ನೀಡಿತ್ತು. ಬಳಿಕ ಅಲ್ಲಿಂದ ಆರೋಪಿಗಳು ರಸ್ತೆಗೆ ಹೋಗಿರುವ ಬಗ್ಗೆ ಸುಳಿವು ನೀಡಿತ್ತು ಪೊಲೀಸ್ ಇಲಾಖೆಯ ಶ್ವಾನ ಬ್ರೇವ್. ಪೊಲೀಸರಿಗೆ ಅಲ್ಲಿಯೇ ಮೊದಲ ಸುಳಿವು ಕುಟುಂಬದೊಳಗಿನವರೆ ಮನೆಗೆ ಬಂದು ಊಟ ಮತ್ತು ಚಾ ಕುಡಿದು ಕೃತ್ಯ ಎಸಗಿರುವ ಬಗ್ಗೆ ಗೊತ್ತಾಗಿದೆ. ಇದರಿಂದ ಕುಟುಂಬದ ಎಲ್ಲ ಸದಸ್ಯರ ಮೊಬೈಲ್ ನಂಬರ್ ಪಡೆದು ಕಾರ್ಯಾಚರಣೆ ನಡೆಸಿದಾಗ ಆಳಿಯ ಮತ್ತು ಮೊಮ್ಮಗ ಸಿಕ್ಕಿ ಬಿದ್ದಿದ್ದಾರೆ.
ಅಜ್ಜನ ಶವ ನೋಡಲು ಬಾರದ ಮೊಮ್ಮಗ:
ಬಾಲಕೃಷ್ಣ ಭಟ್ ಕೊಲೆ ಬಳಿಕ ಬೆಳಾಲು ಮನೆಗೆ ಆ.21 ರಂದು ಮಧ್ಯಾಹ್ನದ ಬಳಿಕ ಮೃತದೇಹ ನೋಡಲು ಮಗಳು ವಿಜಯಲಕ್ಷ್ಮಿ ಮತ್ತು ಆಳಿಯ ರಾಘವೇಂದ್ರ ಕೆಧಿಲಾಯ ಕಾರಿನಲ್ಲಿ ಬಂದಿದ್ದರು. ಮೊಮ್ಮಗ ಮುರುಳಿಕೃಷ್ಣ ಮಾತ್ರ ಬಂದಿರಲ್ಲಿಲ್ಲ. ವಿಚಾರಣೆಯಲ್ಲಿ ಬಾಲಕೃಷ್ಣ ಭಟ್ ಅವರನ್ನು ತಾವು ತಂದಿದ್ದ ಮಾರಕಾಸ್ತ್ರದಿಂದ ರಾಘವೇಂದ್ರ ಕೆಧಿಲಾಯ ಮಗ ಮುರುಳಿಕೃಷ್ಣ ಮಾತ್ರ ಕೊಚ್ಚಿ ಕೊಲೆ ಮಾಡಿದ್ದು ಇದನ್ನು ತಂದೆ ರಾಘವೇಂದ್ರ ಕೆಧಿಲಾಯ ನೋಡುತ್ತಾ ನಿಂತಿದ್ದ. ಬಳಿಕ ಕಪಾಟಿನಲ್ಲಿದ್ದ ದಾಖಲೆ ಪತ್ರ ಹಾಗೂ ಬಾಂಡ್ ಪೇಪರ್ ತೆಗೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮುರುಳಿಕೃಷ್ಣ ವಿರುದ್ಧ ಕೇರಳ ರಾಜ್ಯದ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಕಾರ್ಯಾಚರಣೆ: ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್.ಎನ್ ಮಾರ್ಗದರ್ಶನಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಧರ್ಮಸ್ಥಳ ಸಬ್ ಇನ್ಸ್ಪೆಕ್ಟರ್ ಕಿಶೋರ್.ಪಿ , ಸಬ್ ಇನ್ಸ್ಪೆಕ್ಟರ್ ಸಮರ್ಥ್.ಆರ್.ಗಾಣಿಗೇರಾ ಹಾಗೂ ಸಿಬ್ಬಂದಿಗಳು ಪತ್ತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ.