ಡೈಲಿ ವಾರ್ತೆ: 27/ಆಗಸ್ಟ್/2024

ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ : ಉಳಿದ ಆರೋಪಿಗಳು ಇತರೆಡೆಗೆ ಸ್ಥಳಾಂತರ – ಡಿ ಗ್ಯಾಂಗ್ ದಿಕ್ಕಾಪಾಲು

ಬೆಂಗಳೂರು: ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸೌಲಭ್ಯ ಪ್ರಕರಣ ಜಗಜ್ಜಾಹೀರಾದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರದಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ2 ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ನ್ಯಾಯಾಲಯ ಅನುಮತಿ ನೀಡಿದೆ.
ಇದರ ಜೊತೆಗೆ ಕೊಲೆ ಪ್ರಕರಣದ ಎಲ್ಲಾ ಆರೋಪಿಗಳನ್ನು ರಾಜ್ಯದ ಇತರ ಜಿಲ್ಲಾ ನ್ಯಾಯಾಲಯಗಳಿಗೆ ಒಬ್ಬೊಬ್ಬರನ್ನು ಸ್ಥಳಾಂತರಿಸಲು ನ್ಯಾಯಾಲಯ ಅಧಿಕಾರಿಗಳಿಗೆ ಅನುಮತಿ ಕೊಟ್ಟಿದೆ.

ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಒಪ್ಪಿಗೆ ನೀಡಿದೆ. ಪರಪ್ಪನ ಅಗ್ರಹಾರದಲ್ಲಿ ರೌಡಿಗಳಾದ ನಾಗರಾಜ ಅಲಿಯಾಸ್ ವಿಲ್ಸನ್ ಗಾರ್ಡನ್‌ ನಾಗ, ಶ್ರೀನಿವಾಸ ಅಲಿಯಾಸ್ ಕುಳ್ಳ ಸೀನ, ಧರ್ಮ ಹಾಗೂ ದರ್ಶನ್ ಆಪ್ತ ನಾಗರಾಜ್ ಟೇಬಲ್ ಹಾಕಿ ಕುಳಿತುಕೊಂಡು ಹರಟೆ ಹೊಡೆಯುತ್ತಾ ಟೀ ಮತ್ತು ಸಿಗರೇಟ್‌ ಸೇದುತ್ತಿದ್ದ ಫೋಟೋ ಮತ್ತು ಜೈಲಿನಿಂದ ದರ್ಶನ್‌ , ಕುಟುಂಬದವರು ಮತ್ತು ಇತರರಿಗೆ ವಿಡಿಯೋ ಕಾಲ್ ಮಾಡಿರುವುದು ಬಹಿರಂಗವಾದ ಬಳಿಕ ಜೈಲಿನ ಅವ್ಯವಸ್ಥೆ ಬೆಳಕಿಗೆ ಬಂದಿತ್ತು. ಇದರು ಸರ್ಕಾರಕ್ಕೆ ಮುಜುಗರ ತರಿಸಿತ್ತು ಈ ಹಿನ್ನೆಲೆಯಲ್ಲಿ ಕೆಂಡಾಮಂಡಲವಾದ ಸಿಎಂ ಸಿದ್ದರಾಮಯ್ಯ ಆರೋಪಿಗಳನ್ನು ವಿವಿಧ ಜೈಲುಗಳಿಗೆ ಶಿಫ್ಟ್ ಮಾಡಲು ಸೂಚನೆ ನೀಡಿದ ಬೆನ್ನಲ್ಲೇ ಅಧಿಕಾರಿಗಳಿಗೆ 24ನೇ ಎಸಿಎಂಎಂ ನ್ಯಾಯಾಲಯ ಒಬ್ಬೊಬ್ಬ ಆರೋಪಿಗಳನ್ನು ಒಂದೊಂದು ಕಡೆ ಜೈಲಿಗೆ ಶಿಫ್ಟ್ ಮಾಡಲು ಅನುಮತಿ ನೀಡಿದೆ. ಈ ಹಿನ್ನೆಲೆ ಡಿ ಗ್ಯಾಂಗ್‌ ಒಬ್ಬೊಬ್ಬರು ಒಂದೊಂದು ಕಡೆ ದಿಕ್ಕಾಪಾಲಾಗಿದ್ದಾರೆ.

ದರ್ಶನ್ ಮತ್ತು ಪ್ರದೋಷ್ – ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ, ಪವನ್, ರಾಘವೇಂದ್ರ, ನಂದೀಶ್ ಮೈಸೂರು ಜೈಲು , ಜಗದೀಶ್ ಮತ್ತು ಲಕ್ಷ್ಮಣ್ – ಶಿವಮೊಗ್ಗ ಜೈಲು, ಧನರಾಜ್ – ಧಾರವಾಡ ಜೈಲು, ವಿನಯ್- ವಿಜಯಪುರ ಜೈಲು, ನಾಗರಾಜ್ – ಗುಲ್ಬರ್ಗಾ (ಕಲಬುರಗಿ) ಜೈಲು, ಉಳಿದ ಆರೋಪಿಗಳು ಅಂದರೆ ಅನುಕುಮಾರ್, ದೀಪಕ್ ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ ಇರಲಿದ್ದಾರೆ. ಇನ್ನು ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಬೆಂಗಳೂರು ಕಾರಾಗೃಹದಲ್ಲೇ ಇರಲಿದ್ದಾರೆ. ಈಗಾಗಲೇ ತುಮಕೂರು ಜೈಲಿನಲ್ಲಿ 4 ಜನ ಇದ್ದಾರೆ.