ಡೈಲಿ ವಾರ್ತೆ: 28/ಆಗಸ್ಟ್/2024

ರಾಜ್ಯದಲ್ಲಿ ಹೆಚ್ಚಾದ ಮಂಕಿಪಾಕ್ಸ್ – ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಕ್ರಮಕ್ಕೆ ಆದೇಶ

ಬೆಂಗಳೂರು: ಮಂಕಿಪಾಕ್ಸ್ ಕಾಯಿಲೆ ಹೆಚ್ಚಾಗುತ್ತಿದ್ದಂತೆ ಆರೋಗ್ಯ ಇಲಾಖೆ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ಕ್ರಮಕ್ಕೆ ಆದೇಶ ಹೊರಡಿಸಿದೆ. ಕೇಂದ್ರ ಆರೋಗ್ಯ ಇಲಾಖೆಯ ಸೂಚನೆ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಸುತ್ತೋಲೆ ಪ್ರಕಟಿಸಿದೆ.

ನೆರೆಯ ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್ ಪತ್ತೆ ಹಿನ್ನೆಲೆ ರಾಜ್ಯ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ ಪ್ರಯಾಣಿಕರ ತಪಾಸಣೆಗೆ ಸೂಚನೆ ನೀಡಿದೆ. ಮಂಕಿಪಾಕ್ಸ್ ಶಂಕಿತರನ್ನ ಗುರುತಿಸಿ ಸ್ಕ್ರೀನಿಂಗ್ ಮಾಡುವಂತೆ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡುವಂತೆ ಹೇಳಿದೆ.

ಹೈರಿಸ್ಕ್ ದೇಶಗಳ ಮೇಲೆ ಎಚ್ಚರವಹಿಸುವಂತೆ ಮತ್ತು ಮಂಕಿಪಾಕ್ಸ್ ಕಂಡುಬಂದ ದೇಶಗಳ ಪ್ರಯಾಣಿಕರ ಮೇಲೆ ಹದ್ದಿನಕಣ್ಣಿಡಲು ಸೂಚನೆ ಕೊಟ್ಟಿದೆ.

ಮಂಕಿಪಾಕ್ಸ್ ಶಂಕಿತರ ಚಿಕಿತ್ಸೆಗೆ ಬೆಂಗಳೂರಿನ ಇಂದಿರಾನಗರದ ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಮಂಕಿಪಾಕ್ಸ್ ಶಂಕಿತರು ಕಂಡು ಬಂದರೆ ಶಂಕಿತ ಮಾದರಿಗಳನ್ನ ಬಿಎಮ್ ಸಿ ಲ್ಯಾಬ್ ಕಳಿಸುವಂತೆ ಸೂಚಿಸಿದೆ. ಅಲ್ಲದೆ ಮಂಕಿಪಾಕ್ಸ್ ಕಂಡು ಬಂದರೆ 21 ದಿನಗಳ ಕ್ವಾರಂಟೈನ್ ಗುಳ್ಳೆಗಳು ಸಂಪೂರ್ಣ ವಾಸಿಯಾಗುವರೆಗೂ ಚಿಕಿತ್ಸೆ ನೀಡಲಾಗುತ್ತದೆ ಮತ್ತು ಸೋಂಕಿತರು ಮತ್ತೊಬ್ಬರ ಸಂಪರ್ಕಕ್ಕೆ ಬಾರದಂತೆ ಕ್ವಾರಂಟೈನ್‌ನಲ್ಲಿ ಇರಿಸಬೇಕು ಎಂದು ಹೇಳಿದೆ.