ಡೈಲಿ ವಾರ್ತೆ: 07/Sep/2024

.ಕೆ. ಸಂತೋಷ್ ಶೆಟ್ಟಿ, ಮೊಳಹಳ್ಳಿ, ಕುಂದಾಪುರ. ಉಡುಪಿ ಜಿಲ್ಲೆ.(ಪತ್ರಕರ್ತರು/ ಮಾಧ್ಯಮ ವಿಶ್ಲೇಷಕರು )

” ಮೋದಕ ಪ್ರಿಯಾ, ಗರಿಕೆಯ ಅಲಂಕೃತ ಆರಾಧಿತನಿಗೆ ಚೌತಿಯ ಸಂಭ್ರಮ….!” ಪಾರ್ವತಿ ದೇವಿಯು ಮೈ ಮೇಲಿನ ಮಣ್ಣಿನಿಂದ, ಮೂರ್ತಿಯನ್ನು ತಯಾರಿಸಿ, ಪುತ್ರ ಎಂದು ವ್ಯಾಖ್ಯಾನಿಸಿ, ಜೀವ ಕಳೆಯನ್ನು ಕೊಟ್ಟು, ದ್ವಾರಪಾಲಕನಾಗಿ ರಕ್ಷಿಸಿದ ಪರಮಾತ್ಮನೇ ಮುದ್ದು “ವಿನಾಯಕ…!” ನೂರಾರು ಹೆಸರುಗಳ ನಾಮಾಂಕಿತ,
ಮೊದಲ ಪೂಜಿತ ಆರಾಧಿತನಿಗೆ ನಾಡಿನಾದ್ಯಂತ ಗಣೇಶ ಚತುರ್ಥಿಯ ಸಂಭ್ರಮ

“ವಕ್ರತುಂಡ ಮಹಾಕಾಯ…, ಕೋಟಿ ಸೂರ್ಯ ಸಮಪ್ರಭ… ನಿರ್ವಿಘ್ನಂ ಕುರುಮೇ ದೇವಾ ಸರ್ವ ಕಾರ್ಯೇಷು ಸರ್ವದಾ…..!” ಎನ್ನುವಂತೆ ಗಣೇಶ ಚತುರ್ಥಿಯ ಸಂಭ್ರಮದ ವಾತಾವರಣದಲ್ಲಿ ನಾವಿದ್ದೇವೆ. ಗಣೇಶ ಚತುರ್ಥಿಯ ಸಂಭ್ರಮದ ಭಕ್ತಿಯ ಪರಾಕಾಷ್ಟೆಯನ್ನು ಹೊರ ಸೂಸುತ್ತದೆ . ಮೊದಲ ಪೂಜಿತ ಆರಾಧಿತನಿಗೆ ಚೌತಿಯ ಸಂಭ್ರಮ. ದೇಶದೆಲ್ಲಡೆ ಸಂಭ್ರಮದ ಚತುರ್ಥಿಯ ಕಳೆ ಕಟ್ಟುವ ದಿನ . ವಿಘ್ನ ವಿನಾಶಕನಿಗೆ ಸರ್ವ ಪೂಜೆ ಕಾರ್ಯ ಗಳನ್ನು ನೆರವೇರಿಸಿ, ಜಗತ್ತಿನ ಎಲ್ಲಾ ದೇವರುಗಳ ಮೊದಲ ಸ್ಥಾನವನ್ನು ಪಡೆದುಕೊಂಡ ಗಣಪತಿಗೆ ಮೊದಲ ಪೂಜಿತ ಆರಾಧಿತ ಎಂದು ಕರೆಯುವುದು ಈ ನೆಲದ ಭಕ್ತಿಯ ಗೌರವ..!”
ಸಂಭ್ರಮದ ಗಣೇಶ ಚತುರ್ಥಿಗೆ ನಾವೆಲ್ಲರೂ ಸಂಭ್ರಮದಿಂದ ಸಿದ್ಧವಾಗಿದ್ದೇವೆ.
ಗಣೇಶ ಚತುರ್ಥಿಯ ಆಚರಣೆಯ ಕಥಾ ಮಹತ್ವ :-
ಗಣೇಶ ಚತುರ್ಥಿಯ ಆಚರಣೆ ದಂತಕಥೆಯಲ್ಲಿ ಉಲ್ಲೇಖವಾಗಿರುವಂತೆ,
ಶ್ವೇತ ಕಲ್ಪದಲ್ಲಿ ಶಂಕರನು ತಾನಾಗಿಯೇ ಗಣೇಶನ ಮಸ್ತಕವನ್ನು ಕಡಿದು ಹಾಕಿದನು. ಆ ಕಥೆಯು ಶಿವಪುರಾಣದಲ್ಲಿ ಹೀಗೆ ಉಲ್ಲೇಖಿತವಾಗಿದೆ. ಪಾರ್ವತಿ ದೇವಿಯು ಜಯಾ ಮತ್ತು ವಿಜಯಾ ಎಂಬ ಹೆಸರಿನ ತನ್ನ ಗೆಳತಿಯರ ಸೂಚನೆಯಂತೆ ತನ್ನ ಮೈಮೇಲಿನ ಮಣ್ಣಿನಿಂದ ಒಂದು ಮೂರ್ತಿಯನ್ನು ತಯಾರಿಸಿದಳು. ಅದರಲ್ಲಿ ಜೀವಕಳೆಯನ್ನು ತುಂಬಿ ‘ಪುತ್ರ’ ಎಂದು ಅವನನ್ನು ಕರೆದು ತನ್ನ ಸ್ನಾನಮಂದಿರದ ಬಾಗಿಲಲ್ಲಿ ಕೂರಿಸಿದಳು. ‘ನೀನು ನನ್ನ ದ್ವಾರಪಾಲಕನಾಗಿದ್ದು ‘ಯಾರನ್ನೂ ಒಳಗೆ ಬಿಡಬೇಡ’ ಎಂದು ಕಟ್ಟಪ್ಪಣೆ ಮಾಡಿದಳು. ಆಗ ಮಹಾದೇವನೇ ಸ್ವತಃ ಪಾವರ್ತಿಯನ್ನು ಕಾಣಲು ಬಂದನು. ಆದರೆ ಆ ಬಾಲಕ, ಶಿವನನ್ನು ಒಳಗೆ ಬಿಡದೇ ಬಾಗಿಲಲ್ಲಿಯೇ ತಡೆದು ನಿಲ್ಲಿಸಿದನು. ಆಗ ಶಂಕರನು ಆ ಬಾಲಕನ ಜೊತೆಗೆ ಯುದ್ಧ ಮಾಡಿ ಅವನನ್ನು ಅಲ್ಲಿಂದ ಓಡಿಸಲು ತನ್ನ ಶಿವಗಣಕ್ಕೆ ಆಜ್ಞೆಯಿಟ್ಟನು. ಆ ಯುದ್ಧದಲ್ಲಿ ಗಣೇಶನು ತನ್ನ ಶೌರ್ಯದಿಂದ ಎಲ್ಲರನ್ನು ಹೊಡೆದು ಓಡಿಸಿದನು. ಆದರಿಂದ ಕುಪಿತನಾದ ಗೌರಿ ಪತಿಯು ಗಣೇಶನ ತಲೆಯನ್ನು ಕಡಿದು ಹಾಕಿದನು. ಪುತ್ರನ ಶಿರಚ್ಛೇದನದಿಂದ ಕ್ರುದ್ಧಳಾದ ಪಾವರ್ತಿಯು ಸಾವಿರಾರು ಶಕ್ತಿ ದೇವತೆಯನ್ನು ಉತ್ಪಾದನೆ ಮಾಡಿ ಅವರಿಗೆ ವಿಶ್ವಸಂಹಾರ ಮಾಡಲು ಆಜ್ಞೆಯನ್ನು ನೀಡಿದಳು. ಅದರಂತೆ ಎಲ್ಲಾ ಕಡೆಗೆ ಹಿಂಸಾತಾಂಡವ ನಡೆಯಲು ಋಷಿಗಳು ಭಕ್ತಿಯಿಂದ ವಿಶ್ವದ ರಕ್ಷಣೆಗಾಗಿ ಪ್ರಾರ್ಥಿಸಿದರು. ಆಗ ಅವಳು “ಶಿವನು ತಲೆ ಕಡಿದು ಹಾಕಿದ ನನ್ನ ಮಗನು ಬದುಕಿ ಬಂದರೆ ಮತ್ತು ಅವನನ್ನು ಸರ್ವಾಧ್ಯಕ್ಷ ಸ್ಥಾನದಲ್ಲಿ ಪಟ್ಟಾಭಿಷೇಕ ಮಾಡಿದರೆ ಮಾತ್ರ ಈ ಸಂಹಾರ ಕಾರ್ಯವನ್ನು ನಿಲ್ಲಿಸಲು ಹೇಳುತ್ತೇನೆ” ಎಂದಳು.

ಆಗ ದೇವತೆಗಳು ಹಾಗೇ ಆಗಲಿ ಎಂದು ಹೋಗಿ ದಾರಿಯಲ್ಲಿ ಒಂದೇ ಕೋರೆ ದಾಡೆಯುಳ್ಳ, ಮಲಗಿದ ಆನೆಯ ಮಸ್ತಕವನ್ನು ಕತ್ತರಿಸಿ ತಂದರು. ಅಭಮಂತ್ರಿಕ ನೀರಿನಿಂದ ಆ ಆನೆಯ ಮಸ್ತಕವನ್ನು ಸಿಂಚನ ಮಾಡಿ ಆ ಮಗುವಿನ ತಲೆಯ ಸ್ಥಾನದಲ್ಲಿ ಕೂಡಿಸಿದರು. ಶಂಕರನ ದಯೆಯಿಂದ ಆ ಹುಡುಗನು ಪುನಃ ಉಜ್ಜೀವಿತವಾಗಿ ಚೈತನ್ಯ ಶಕ್ತಿಯಿಂದ ಪೂರ್ಣನಾಗಿ ಅತ್ಯಂತ ಸುಂದರನಾಗಿ ಶೋಭಿಸಿದನು. ಆಗ ಎಲ್ಲಾ ದೇವತೆಗಳು, ಬ್ರಹ್ಮದೇವರು ಕೂಡಿ ಆ ಗಜಮುಖನನ್ನು ಗಣಾಧ್ಯಕ್ಷ ಸ್ಥಾನದಲ್ಲಿ ಅಭಿಷೇಕ ಮಾಡಿದರು.” ಪಾವರ್ತಿಯು ಆನಂದದಿಂದ ಅವನ ತಲೆಯ ಮೇಲೆ ಕೈಯಿಟ್ಟು “ಪುತ್ರೋಯಮಿಯೇ ಪರಃ” ಇವನು ಸ್ಕಂದನ ನಂತರ ನನ್ನ ಎರಡನೇಯ ಪುತ್ರನು ಎಂದು ಪ್ರೀತಿಯಿಂದ ನುಡಿದಳು.

ಶಿವಪುರಾಣದ ದಂತಕಥೆ ಸಾರಾಂಶ :-ಶಿವಪುರಾಣದಲ್ಲಿ ಹೇಳಿರುವಂತೆ ಗಣಪತಿಯನ್ನು ತುಳಸೀ ದಳದಲ್ಲಿ ಪೂಜಿಸಬಾರದು. ಏಕೆಂದರೆ ತುಳಸಿಯ ದರ್ಶನ ಮತ್ತು ಗಂಧಗಳು ಗಣೇಶ ದೇವರಿಗೆ ಸಂಬಂಧಪಟ್ಟ ಒಳಕೇಂದ್ರಗಳನ್ನು ಮುಚ್ಚುತ್ತವೆ. ಕೇತಕೀ ಪುಷ್ಪದ ಸ್ಪರ್ಶವು ಶಿವನ ದರ್ಶನಕ್ಕೆ ಸಂಬಂಧಪಟ್ಟ ಕೇಂದ್ರಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚೌತಿಯ ಚಂದ್ರನ ದರ್ಶನವೂ ಗಣೇಶನ ಉಪಾಸನೆಗೆ ಪ್ರತಿಬಂಧಕವಾಗಿದೆ.
ಸೂರ್ಯನು ಬುದ್ಧಿತತ್ವಕ್ಕೆ ಮತ್ತು ಚಂದ್ರನು ಮನಸ್ತತ್ವಕ್ಕೆ ದೇವತೆ. ಗಣೇಶನ ಆಳ್ವಿಕೆಗೆ ಒಳಪಟ್ಟಿರುವ ಇಪ್ಪತ್ತೊಂದು ತತ್ವಗಳಲ್ಲಿ ಕೊನೆಯದು ಮನಸ್ಸು. ಉಳಿದ ಇಪ್ಪತ್ತು ತತ್ವಗಳಾವುವೆಂದರೆ, ಪಂಚಭೂತಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಜ್ಞಾನೇಂದ್ರಿಯಗಳು ಮತ್ತು ಪಂಚತನ್ಮಾತ್ರೆಗಳು. ಮನಸ್ಸನ್ನು ಸಂಯಮದಿಂದ ಒಳಗಿನ ಜ್ಞಾನಾಕಾಶದಲ್ಲಿ ಲಯಗೊಳಿಸಿದರೆ ಗಣೇಶನ ಮಹಿಮೆಯ ಅನುಭವ ಉಂಟಾಗುತ್ತದೆ.
ಗಣೇಶ ಚತುರ್ಥಿಯ ರಾತ್ರಿ ಇಂತಹ ಸಂಯಮದಲ್ಲಿದ್ದು ಭಗವಂತನ ನಿಜಸ್ವರೂಪವನ್ನು ಅನುಭವಿಸುತ್ತಾ ಆನಂದವಾಗಿರಬೇಕು. ಹಾಗೆ ಮಾಡದೇ ಅದನ್ನು ಹೊರಗಿನ ಆಕಾಶದಲ್ಲಿ ಕಾಣುವ ಚಂದ್ರರೂಪದಲ್ಲಿ ನೋಡುವುದರಲ್ಲಿ ಆಸಕ್ತಿ ಹೊಂದಿದರೆ, ಗಣೇಶನ ಅಪಾರಶಕ್ತಿಯು ನಮ್ಮನ್ನ ರಕ್ಷಿಸುವುದರೊಂದಿಗೆ ಹಲವು ಪರಾಕಾಷ್ಠೆಗಳನ್ನು ಆಸ್ವಾದಿಸುತ್ತದೆ.
ಗೌರಿ ವ್ರತ ಆಚರಣೆ :-
ಗೌರಿ ಹಬ್ಬ ಕನ್ನಡ ನಾಡಿನ ದೊಡ್ಡ ಹಬ್ಬ. ಭಾದ್ರಪದ ತದಿಗೆಯಂದು ಗೌರಿ ಹಬ್ಬ ಆಚರಿಸಲಾಗುತ್ತದೆ . ಇದು ಮುತ್ತೈದೆಯರಿಗೆಲ್ಲಾ ಸೌಭಾಗ್ಯ ನೀಡುವ ಹಬ್ಬ ಎಂಬ ನಂಬಿಕೆ.ಒಮ್ಮೆ ಬಹಳ ಬರಗಾಲ ಬಂದು ಕೆರೆ ಕೊಳ್ಳಗಳೆಲ್ಲ ವರ್ಷಗಟ್ಟಲೆ ಬತ್ತಿ ಆಕಾರ ಎದ್ದೇಳುತ್ತದೆ. ಜನ ದನಗಳಿಗೆ ಕುಡಿವ ನೀರು ಕೂಡ ಇಲ್ಲದೇ ಕಂಗಾಲಾಗುತ್ತಾರೆ. ಬುಡಬಡಿಕೆಯವನೊಬ್ಬ “ಮುತ್ತೈದೆಯೊಬ್ಬಳನ್ನು ಕೆರೆಗೆ ಹಾರ (ಬಲಿ) ಕೊಡುವುದಾದರೆ ಕೆರೆ ತುಂಬುವಷ್ಟು ಮಳೆಯಾಗುತ್ತದೆ” ಎಂದು ಹೇಳಿ ಹೋಗುತ್ತಾನೆ. ಆಗ ಊರ ಗೌಡನಿಗೆ ಚಿಂತೆ ಆಗುತ್ತದೆ. ಯಾರು ಇದಕ್ಕೆ ಒಪ್ಪುತ್ತಾರೆ ಎಂದು.ಆಗ ಅವನ ಹಿರಿ ಸೊಸೆ ‘ಗೌರಿ’ ಮುಂದೆ ಬಂದು “ಮಳೆ ಬಂದು ಕೆರೆ ತುಂಬಿದಲ್ಲಿ ಮುತ್ತೈದೆಯನ್ನು ಬಲಿ ಕೊಡುವುದಾಗಿ ಹರಕೆ ಹೊತ್ತುಕೊಳ್ಳಿ. ಕೆರೆ ತುಂಬಿದಲ್ಲಿ ತಾನು ಆ ಹರಕೆಯನ್ನು ನೆರವೇರಿಸುತ್ತೇನೆ” ಎಂದು ಹೇಳುತ್ತಾಳೆ. ಅದರಂತೆಯೇ ಗೌಡನು ಹರಕೆ ಹೊತ್ತುಕೊಳ್ಳುತ್ತಾನೆ. ಕಾಕತಾಳೀಯವೋ ಎಂಬಂತೆ ಅದೇ ವರ್ಷ ತುಂಬಾ ಮಳೆ ಸುರಿದು ಕೆರೆ ಕೊಳ್ಳಗಳೆಲ್ಲ ತುಂಬಿ ತುಳುಕುತ್ತವೆ.ಮಾವನಿಗೆ ಕೊಟ್ಟ ಮಾತಿನಂತೆ ಗೌರಿ ಆ ಕೆರೆಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾಳೆ. ಅವಳ ತಂಗಿ ‘ಗಂಗೆ’ ( ಕಿರಿ ಸೊಸೆ ) ಕೂಡ ಮರುದಿನ ಅಕ್ಕನ ಅಗಲಿಕೆಯ ನೋವು ತಾಳಲಾಗದೆ ತಾನೂ ಕೆರೆಗೆ ಹಾರವಾಗುತ್ತಾಳೆ.ಈ ಗೌರಿಯನ್ನು ನೆನಪಿಸಿಕೊಂಡು ಆ ಕೆರೆಯಿಂದ ( ಸೂಳೇಕೆರೆಯೇ ಅದು ಎಂಬ ನಂಬುಗೆಯಿದೆ ) ಒಂದು ತಂಬಿಗೆ ನೀರನ್ನು ತಂದು ಪೂಜಿಸಿ ಮತ್ತೆ ಅದೇ ಕೆರೆಗೆ ಬಿಡುವ ಆಚರಣೆ ಜಾರಿಗೆ ಬಂದಿರಬಹುದು. ಮಲೆನಾಡಿನ ಕೆಲವೆಡೆ ಗೌರಿಯನ್ನು ಬಿಟ್ಟ ಬಳಿಕ ಗಂಗೆಯನ್ನೂ ತಂದು ಪೂಜಿಸುವ ಆಚರಣೆ ಇದೆ.

ಒಟ್ಟಾರೆಯಾಗಿ ಗಣೇಶ ಚತುರ್ಥಿ ಮತ್ತು ಗೌರಿ ಆಚರಣೆ ದೇಶದ ಪ್ರಥಮ ಪೂಜಿತ ಆರಾಧಿಕನಿಗೆ ವಿವಿಧ ರೂಪದಲ್ಲಿ ಸಂಭ್ರಮದಿಂದ ಆಚರಿಸಿ ಭಕ್ತಿಯ ಪರಾಕಷ್ಟೇudaಯನ್ನ ಹೊರಸುಸುತ್ತಾರೆ. ವಿಘ್ನ ವಿನಾಶಕನಿಗೆ ವಿಶಿಷ್ಟ ರೀತಿಯ ಆಚರಣೆ ಈ ತರಹದ ಭಕ್ತಿಯ ಸಾರಾಂಶವನ್ನು ತೆರೆದಿಟ್ಟುಕೊಳ್ಳುತ್ತದೆ. ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು.