ಡೈಲಿ ವಾರ್ತೆ: 12/Sep/2024

ಲಾಂಗ್ ಡ್ರೈವ್‌ಗೆಂದು ಬೈಕ್‌ನಲ್ಲಿ ಬಂದಿದ್ದ ಮೂವರು ವಿದ್ಯಾರ್ಥಿಗಳು ಅಪಘಾತದಲ್ಲಿ ಮೃತ್ಯು!

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಉತ್ತರ ತಾಲೂಕಿನ ಚಿಕ್ಕಜಾಲ ಗ್ರಾಮದ ಏರ್‌ಪೋರ್ಟ್‌ ರಸ್ತೆಯಲ್ಲಿ ತಡರಾತ್ರಿ ಹಿಟ್‌ ಆ್ಯಂಡ್‌ ರನ್‌ಗೆ ಮೂವರು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ.

ಮೃತ ವಿದ್ಯಾರ್ಥಿಗಳನ್ನು ರೋಹಿತ್ (22), ಸುಚಿತ್ (22) ಹಾಗೂ ಹರ್ಷಾ (22) ಎಂದು ಗುರುತಿಸಲಾಗಿದೆ.

ಜಿಕೆವಿಕೆಯಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಈ ಮೂವರು ರಾತ್ರಿ ಲಾಂಗ್ ಡ್ರೈವ್‌ಗೆಂದು ಬೈಕ್‌ನಲ್ಲಿ ಬಂದಿದ್ದರು. ಈ ವೇಳೆ ಅಪರಿಚಿತ ವಾಹನವೊಂದು ಗುದ್ದಿದ ರಭಸಕ್ಕೆ ಹಾರಿ ಬಿದ್ದ ಮೂವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ಅಪಘಾತಕ್ಕೆ ಹೆದ್ದಾರಿಯಲ್ಲೆ ಮೃತದೇಹಗಳು ನಜ್ಜು ಗುಜ್ಜಾಗಿದ್ದವು. ಮಧ್ಯರಾತ್ರಿ 01 ಗಂಟೆ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದ ನಂತರ ವಾಹನ ಸಮೇತ ಚಾಲಕ ಪರಾರಿ ಆಗಿದ್ದಾನೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮೃತದೇಹಗಳನ್ನು ಬೆಂಗಳೂರಿನ ಅಂಬೇಡ್ಕರ್ ಆಸ್ವತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.