ಡೈಲಿ ವಾರ್ತೆ: 15/Sep/2024

ಬಂಟ್ವಾಳ : ಸಾಮಾಜಿಕ ಜಾಲತಾಣಗಳ‌ ಮೂಲಕ ಪ್ರಚೋದನೆಕಾರಿ ಹೇಳಿಕೆ.
ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ : ಸಾಮಾಜಿಕ ಜಾಲತಾಣಗಳ‌ ಮೂಲಕ ಪ್ರಚೋದನೆಕಾರಿಯಾಗಿ ಹೇಳಿಕೆ ನೀಡಿರುವ ಆರೋಪದಡಿ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಹಾಗೂ ಸದಸ್ಯರೋರ್ವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಠಾಣೆಗೆ ನೀಡಲಾದ ದೂರಿನನ್ವಯ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಹಾಗೂ ಸದಸ್ಯ ಹಸೈನಾರ್ ಅವರ ವಿರುದ್ಧ ದೂರು ದಾಖಲಾಗಿದೆ.

ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಬಜರಂಗದಳ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು ಖಂಡನೆ ಹೇಳಿಕೆಯ ನೀಡುವ ಸಂದರ್ಭದಲ್ಲಿ ಮಿಲಾದ್ ರ್ಯಾಲಿಯ ವಿರುದ್ಧ ಹೇಳಿಕೆ ನೀಡಿದ್ದರು. ಇದನ್ನು ವಿರೋದಿಸಿದ ಹೇಳಿಕೆಯೊಂದನ್ನು ಮುಹಮ್ಮದ್ ಶರೀಫ್ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು. ಇದು ಸಖತ್ ವೈರಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಸಾಮರಸ್ಯದಲ್ಲಿದ್ದ ಬಂಟ್ವಾಳ ದಲ್ಲಿ ಸಾಮಾಜಿಕ ಜಾಲತಾಣಗಳ‌ ಮೂಲಕ ಪ್ರಚೋದನೆಕಾರಿಯಾಗಿ ಹೇಳಿಕೆ ನೀಡಿರುವ ಮುಹಮ್ಮದ್ ಶರೀಫ್, ಶರಣ್ ಪಂಪ್ ವೆಲ್ ಅವರ ಬಗ್ಗೆ ಆಡಿಯೋ ಮೂಲಕ ಬೆದರಿಕೆ ಹಾಕಿದ್ದಾನೆ. ಇದು ಇಡೀ ಹಿಂದೂ ಸಮಾಜದ ಮೇಲೆ ಬೆದರಿಕೆಯಾಗಿದ್ದು, ಈತನನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಠಾಣೆಗೆ ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ