

ಡೈಲಿ ವಾರ್ತೆ: ಫೆ./05/2026
ಕೋಟ| ವಾಟ್ಸ್‌ಆಪ್ ಮೂಲಕ ಸುಳ್ಳು ದಾಖಲೆ ಕಳುಹಿಸಿ ₹50 ಸಾವಿರಕ್ಕೆ ಬೇಡಿಕೆ – ಮಾಜಿ ನೌಕರನ ವಿರುದ್ಧ ಪ್ರಕರಣ ದಾಖಲು

ಕೋಟ: ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ವಾಟ್ಸ್‌ಆಪ್ ಮೂಲಕ ಸುಳ್ಳು ದಾಖಲೆಗಳು ಹಾಗೂ ಅಪಪ್ರಚಾರ ಬರಹಗಳನ್ನು ಕಳುಹಿಸಿ, ಹಣಕ್ಕೆ ಬೆದರಿಕೆ ಹಾಕಿದ ಆರೋಪದ ಮೇಲೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರ ರಾಘವೇಂದ್ರ (41), ಕೋಡಿಕನ್ಯಾನ ಗ್ರಾಮ, ಬ್ರಹ್ಮಾವರ ನಿವಾಸಿಯಾಗಿದ್ದು, ಅವರು ಶ್ರೀ ರಾಮಾಂಜನೇಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ (ನಿ), ಕೋಡಿಕನ್ಯಾನದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದಿನಾಂಕ 26/12/2026 ರಂದು ಬೆಳಿಗ್ಗೆ 10:43 ಗಂಟೆಗೆ ಅವರ ವಾಟ್ಸ್‌ಆಪ್‌ಗೆ ಸಹಕಾರಿ ಸಂಘದ ಕೆಲವೊಂದು ದಾಖಲೆಗಳ ಜೊತೆಗೆ ಸುಳ್ಳು ಬರಹಗಳನ್ನು ಕಳುಹಿಸಿ, ನಿನ್ನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬೆದರಿಕೆ ಸಂದೇಶಗಳು ಬಂದಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ವಿಚಾರಿಸಿದಾಗ, ಕೋಡಿಕನ್ಯಾನ ನಿವಾಸಿ ಚೇತನ್ ಕುಂದರ್ ಎಂಬಾತನು 2020–2022ರ ಅವಧಿಯಲ್ಲಿ ಕೋಡಿಕನ್ಯಾನ ಹಾಗೂ ಸಾಲಿಗ್ರಾಮ ಶಾಖೆಗಳಲ್ಲಿ ಗುಮಾಸ್ತನಾಗಿ ಕರ್ತವ್ಯ ನಿರ್ವಹಿಸಿ, ನಂತರ ಯಾವುದೇ ಸೂಚನೆ ನೀಡದೇ ಕೆಲಸ ಬಿಟ್ಟಿರುವುದು ತಿಳಿದುಬಂದಿದೆ. ಚೇತನ್ ಕುಂದರ್ ತನ್ನ ಸ್ನೇಹಿತ ಹಿತೇಶ್‌ಗೆ ಹೇಳಿ, ಮಾಲ್ಡೀವ್ಸ್‌ನಿಂದ ಈ ಸಂದೇಶಗಳನ್ನು ಕಳುಹಿಸಿದ್ದಾಗಿ, “ಇದನ್ನು ನೀನು ಪತ್ತೆಹಚ್ಚಲು ಸಾಧ್ಯವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹಾಕಬಾರದು ಎಂದರೆ ₹50 ಸಾವಿರ ನೀಡಬೇಕು, ಇಲ್ಲವಾದರೆ ಈ ದಾಖಲೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಿ ನಿನ್ನ ಮಾನಮರ್ಯಾದೆ ಕಳೆಯುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ದೂರಿನ ಆಧಾರದಲ್ಲಿ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 15/2026 ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ ಕಲಂಗಳು 66(C), 66(E), 67 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಕಲಂಗಳು 316, 318(4), 308(2) r/w 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.