ಡೈಲಿ ವಾರ್ತೆ: 26/Sep/2024

ಬಾಗಲಕೋಟೆ: ನಿದ್ದೆ ಮಂಪರಿನಿಂದ ಕ್ಯಾಂಟರ್​ಗೆ ಕಾರು ಡಿಕ್ಕಿ, ಸ್ಥಳದಲ್ಲೇ ನಾಲ್ವರ ಸಾವು

ಬಾಗಲಕೋಟೆ: ಕ್ಯಾಂಟರ್​ಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ.

ಅಪಘಾತದಲ್ಲಿ ಲಕ್ಷ್ಮಣ ವಡ್ಡರ್(55), ಬೈಲಪ್ಪ ಬಿರಾದಾರ್(45), ರಾಮಣ್ಣ ನಾಯಕ(50), ಚಾಲಕ ರಫಿಕ್ ಮುಲ್ಲಾ(25) ಎಂಬ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು, ವಿಜಯಪುರ ಜಿಲ್ಲೆ ಬಿದರಕುಂದಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.

ಮುದ್ದೇಬಿಹಾಳದ ಕಡೆಯಿಂದ ಬಂದ ಕಾರು ಹುನಗುಂದ ಕಡೆ ತೆರಳುತ್ತಿದ್ದ ಕ್ಯಾಂಟರ್​ ಗೆ ಡಿಕ್ಕಿ ಹೊಡೆದಿದೆ.
ಕಾರು ಚಾಲಕ ನಿದ್ದೆ ಮಂಪರಿನಿಂದ ಕ್ಯಾಂಟರ್​ಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.

ಕ್ಯಾಂಟರ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹುನಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.