ಡೈಲಿ ವಾರ್ತೆ: 26/Sep/2024

ಕಾರವಾರ: ಉದ್ಯಮಿ ಹತ್ಯೆ ಪ್ರಕರಣ – ಪ್ರಮುಖ ಆರೋಪಿ ಆತ್ಮಹತ್ಯೆ, ಮೂವರ ಬಂಧನ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗ್ರಾಮದ ಮನೆಯಲ್ಲಿ ನಸುಕಿನ ಜಾವ ಬರ್ಬರ ಕೊಲೆಯಾದ ಮಹಾರಾಷ್ಟ್ರದ ಪುಣೆಯ ಉದ್ಯಮಿ ವಿನಾಯಕ ನಾಯ್ಕ ಭೀಕರ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಿಹಾರದ ಮೆಹೆಂದರ್ ಪುರ್‌ನ ಅಜ್ಮಲ್ ಜಾಬಿರ್ ,ಮಾಸುಮ್ ಮಂಜೂರ್ ,ಅಸ್ಸಾಂನ ಬರುವದಾಲ್ನಿ ಲಕ್ಷ್ ಜ್ಯೋತಿನಾಥ್ ಇವರನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿ ಗೋವಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದಲ್ಲಿನ ದ್ವೇಷದಿಂದ ಎರಡು ಜೀವಗಳು ಬಲಿಯಾಗಿವೆ ಎಂದು ತಿಳಿದು ಬಂದಿದೆ.

ಕೊಲೆ ನಡೆದ ಮೂರು ದಿನದಲ್ಲಿ ಖಾಕಿ ಪಡೆ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಆದರೆ ಪ್ರಮುಖ ಆರೋಪಿ ಉದ್ಯಮಿ ಗುರುಪ್ರಸಾದ್ ರಾಣೆ ಗೋವಾದಲ್ಲಿ ಮಾಂಡವಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ.