ಡೈಲಿ ವಾರ್ತೆ: 02/OCT/2024

ಕೋಟ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಅಪರಿಚಿತ ವ್ಯಕ್ತಿಗೆ ಗಂಭೀರ ಗಾಯ

ಕೋಟ: ಚಲಿಸುತ್ತಿದ್ದ ರೈಲಿನಿಂದ ಆಯಾ ತಪ್ಪಿ ಬಿದ್ದು ಅಪರಿಚಿತ ವ್ಯಕ್ತಿಯೋರ್ವ ಗಂಭೀರ ಗಾಯಗೊಂಡ ಘಟನೆ ಕೋಟ ಸಮೀಪದ ಬೇಳೂರಿನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.

ಪುಣೆ ಕಡೆ ತೆರಳುವ ಪುಣೆ ಎಕ್ಸ್‌ಪ್ರೆಸ್‌ ರೈಲಿನಿಂದ ವ್ಯಕ್ತಿಯೋರ್ವ ಆಯಾತಪ್ಪಿ ಗದ್ದೆಗೆ ಉರುಳಿ ಬಿದ್ದು, ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ನೋಡಿದ ಗದ್ದೆ ಕೆಲಸ ಮಾಡುತ್ತಿದ್ದ ಸ್ಥಳೀಯ ಮಹಿಳೆಯೋರ್ವರು ತಕ್ಷಣ ಇಲ್ಲಿನ ಸ್ಥಳೀಯರಿಗೆ ತಿಳಿಸಿದರು. ಸ್ಥಳೀಯರು ಕೊಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕಾಗಮಿಸಿದ ಜೀವನ್‌ಮಿತ್ರ ನಾಗರಾಜ್‌ ಪುತ್ರನ್‌ ಗಾಯಾಳು ವ್ಯಕ್ತಿಯನ್ನು ತಮ್ಮ ಆಂಬುಲೆನ್ಸ್ ನಲ್ಲಿ ಕೋಟ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಯಿತು.
ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿ ಉತ್ತರ ಭಾರತ ಮೂಲದವರು ಎಂದು ತಿಳಿದುಬಂದಿದ್ದು ಆತನ ಕುರಿತು ವಿವರಗಳು ಇನ್ನಷ್ಟೇ ತಿಳಿಯಬೇಕಿದೆ.

ಸ್ಥಳಕ್ಕೆ ಕೋಟ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.