ಡೈಲಿ ವಾರ್ತೆ: 06/OCT/2024

ಮಂಗಳೂರು: ಮಾಜಿ ಶಾಸಕ ಮೊಯಿದೀನ್ ಬಾವಾ ಸೋದರ ನಾಪತ್ತೆ – ಕುಳೂರು ಸೇತುವೆ ಬಳಿ ಕಾರು ಪತ್ತೆ, ಅಗ್ನಿಶಾಮಕ ದಳದವರಿಂದ ಶೋಧ

ಮಂಗಳೂರು: ಮಾಜಿ ಶಾಸಕ ಮೊಯಿದ್ದೀನ್ ಬಾವಾ ಸೋದರ ಉದ್ಯಮಿ ಮುಮ್ತಾಜ್ ಅಲಿ (52) ಭಾನುವಾರ ನಸುಕಿನ ಜಾವ ನಾಪತ್ತೆಯಾಗಿದ್ದಾರೆ. ಬೆಳಿಗ್ಗೆ 3 ಗಂಟೆ ಸುಮಾರಿಗೆ ಮನೆಯಿಂದ ಹೊರಟವರು ಬೆಳಿಗ್ಗೆ ಸುಮಾರು 5 ಗಂಟೆಗೆ ಕುಳೂರು ಸೇತುವೆ ಬಳಿ ಅವರ ಬಿಎಂಡಬ್ಲ್ಯೂ ಕಾರು ಅಪಘಾತ ಸ್ಥಿತಿಯಲ್ಲಿ ಪತ್ತೆಯಾಗಿದೆ ಅಲ್ಲದೆ ಮೊಬೈಲ್ ಸ್ವಿಚ್ ಆಫ್ ಆಗಿದೆ.

ಈ ಹಿನ್ನಲೆಯಲ್ಲಿ ಪೊಲೀಸರು ಅಗ್ನಿಶಾಮಕ ದಳದ ಸಹಾಯದೊಂದಿಗೆ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಅವರ ಕಾರು ಪತ್ತೆಯಾದ ಸ್ಥಳಕ್ಕೆ ಮಾಜಿ ಶಾಸಕ ಮೊಯಿದ್ದೀನ್ ಬಾವ ಸೇರಿದಂತೆ ಕುಟುಂಬಸ್ಥರು ಭೇಟಿ ನೀಡಿದ್ದಾರೆ.

ಮುಮ್ತಾಜ್ ಅಲಿ ಹೆಸರಾಂತ ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು ಉದ್ಯಮಿಯಾಗಿದ್ದಾರೆ. ಅವರ ನಾಪತ್ತೆ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.