ಡೈಲಿ ವಾರ್ತೆ: 22/OCT/2024

ಉಡುಪಿ: ಕ್ಷುಲ್ಲಕ ಕಾರಣಕ್ಕಾಗಿ ಸ್ನೇಹಿತನ ಕತ್ತು ಸೀಳಿ ಭೀಕರ ಕೊಲೆ – ಪೊಲೀಸರಿಗೆ ಕರೆ ಮಾಡಿದ ಆರೋಪಿ

ಉಡುಪಿ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೋರ್ವ ತನ್ನ ಸ್ನೇಹಿತನನ್ನೆ ಕತ್ತು ಸೀಳಿ ಕೊಲೆಗೈದ ಭೀಕರ ಘಟನೆಯೊಂದು ಉಡುಪಿ ಹಳೆ ಕೆಎಸ್ ಆರ್ ಟಿಸಿ ಬಳಿಯ ಕೃಷ್ಣ ಕೃಪಾ ಬಿಲ್ಡಿಂಗ್ ನ ನೆಲ ಅಂತಸ್ತಿನ ಕೊಠಡಿಯಲ್ಲಿ ಇಂದು ಬೆಳಿಗ್ಗೆ ನಡೆದಿದೆ.

ಕೊರಂಗ್ರಪಾಡಿಯ ಪ್ರಶಾಂತ್ ಶೆಟ್ಟಿ (32) ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ನಿವಾಸಿ ಈರಣ್ಣ ಯಾನೆ ದಿನೇಶ್ ಎಂಬಾತ ಕೊಲೆ ಮಾಡಿದ ಆರೋಪಿ.
ಕಂಠಪೂರ್ತಿ ಕುಡಿದು ಇಬ್ಬರು ಜಗಳ ಮಾಡಿಕೊಂಡಿದ್ದು, ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಆರೋಪಿ ಈರಣ್ಣ ಹರಿತವಾದ ಚೂರಿಯಿಂದ ಪ್ರಶಾಂತ್ ನ ಕತ್ತು ಸೀಳಿದ್ದಾನೆ. ಗಂಭೀರವಾಗಿ ಗಾಯಗೊಂಡ ಪ್ರಶಾಂತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಕತ್ತು ಸೀಳಿದ ಬಳಿಕ ಆರೋಪಿಯು ಖುದ್ದು ಪೊಲೀಸರಿಗೆ ಕರೆ ಮಾಡಿ, ಸ್ನೇಹಿತನನ್ನು ಕೊಲೆ ಮಾಡಿರುವುದಾಗಿ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.