ಡೈಲಿ ವಾರ್ತೆ: 01/NOV/2024
ಮಂಗಳೂರು: ವಿದೇಶದಿಂದ ಅಪಾರ ಪ್ರಮಾಣದ ಮಾದಕ ವಸ್ತು ಪೂರೈಕೆ – ಸಿಸಿಬಿ ಪೊಲೀಸರ ಕಾರ್ಯಾಚರಣೆ, ಓರ್ವನ ಸೆರೆ
ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ನಗರಕ್ಕೆ ವಿದೇಶದಿಂದ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿ, ಆತನಿಂದ 30 ಲಕ್ಷ ರೂ. ಮೌಲ್ಯದ ಹೈಡ್ರೋವೀಡ್ ಗಾಂಜಾ, 2.5 ಕೆಜಿ ಗಾಂಜಾ ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡ ಘಟನೆ ನ. 1 ರಂದು ಶುಕ್ರವಾರ ನಡೆದಿದೆ.
ಪುತ್ತೂರು ಹಾರಾಡಿಯ ಪ್ರಸ್ತುತ ತೊಕ್ಕೊಟ್ಟು ಚೊಂಬುಗುಡ್ಡೆ ಮಸೀದಿ ಹತ್ತಿರದ ನಿವಾಸಿ ಎಚ್. ಮೊಹಮ್ಮದ್ ಹಫೀಜ್ (23) ಬಂಧಿತ ಆರೋಪಿ.
ಖಚಿತ ಮಾಹಿತಿ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ನಗರದ ಕುದ್ರೋಳಿ ಪರಿಸರದಲ್ಲಿ ಹೈಡ್ರೋವೀಡ್ ಗಾಂಜಾ ಮತ್ತು ಗಾಂಜಾವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಈತನ ವಶದಿಂದ 30 ಲಕ್ಷ ರೂಪಾಯಿ ಮೌಲ್ಯದ 300 ಗ್ರಾಂ ಹೈಡ್ರೋವೀಡ್ ಗಾಂಜಾ ಹಾಗೂ 75,000 ರೂ.ಮೌಲ್ಯದ 2.5 ಕೆಜಿ ಗಾಂಜಾ, ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯಿಂದ ಅಂದಾಜು 30,85,500 ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.