ಡೈಲಿ ವಾರ್ತೆ: 17/NOV/2024

ಪದ್ಮಶ್ರೀ ಡಾ.ವಿಜಯ ಸಂಕೇಶ್ವರರಿಗೆ ಕೋಟದ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ – ಓದುಗರ ಸಂಖ್ಯೆ ಕಡಿಮೆ, ಸಮಾಜದ ಮೇಲೆ ದುಷ್ಪರಿಣಾಮ – ವಿಜಯ ಸಂಕೇಶ್ವರ

ಕೋಟ:ಎಲ್ಲವೂ ಇಂದು ಡಿಜಿಟಲ್ ಆದ ಕಾರಣ ಪುಸ್ತಕ ಓದುಗರ ಸಂಖ್ಯೆ ವಿರಳವಾಗಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ವಿಜಯ ಸಂಕೇಶ್ವರ ಹೇಳಿದರು.


ಶನಿವಾರ ಕೋಟದ ಗಾಂಧಿ ಮೈದಾನದಲ್ಲಿ ಕೋಟ ಪಂಚವರ್ಣ ಯುವಕ ಮಂಡಲ ಅಧೀನಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪ್ರತಿವರ್ಷ ನಡೆಸಲ್ಪಡುವ ಕನ್ನಡ ರಾಜ್ಯೋತ್ಸವ ಸದ್ಭಾವನಾ ೨೦೨೪ರ ನಾಡುನುಡಿಗೆ ಭಾವ ನಮನ ಕಾರ್ಯಕ್ರಮದಲ್ಲಿ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ ಇಂದಿನ ಯುವ ಜನಾಂಗಕ್ಕೆ ನೆನಪಿನ ಶಕ್ತಿ ಕಡಿಮೆಗೊಂಡಿದೆ. ಹಿಂದೆ ಓದಿದ್ದು ಇನ್ನು ನೆನಪಿಸಿದಲ್ಲಿ ನೆನಪಿರಲ್ಲ. ಆದರೆ ಹಿಂದಿನವರು ಯಾವಾಗಲೂ ತಮ್ಮ ಹಳೆಯ ಓದಿದ ಸಂಗತಿಗಳನ್ನು ನೆನಪಿಸಿಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ. ಡಿಜಿಟಲ್‌ನಿಂದ ಮೆದುಳಿನ ಕಂಟ್ರೋಲ್‌ನ್ನು ಕಳೆದು ಕೊಂಡಿದ್ದಾರೆ ಎಂದರು. ದೇಶದ 23 ರಾಜ್ಯಗಳಲ್ಲಿ ಗುಟ್ಕಾ ತಂಬಾಕು ನಿಷೇಧ ಮಾಡಿದ್ದರೂ ಕರ್ನಾಟಕದಲ್ಲಿ ಮಾತ್ರ ನಿಷೇಧ ಮಾಡದಿರುವುದು ದುರದೃಷ್ಟಕರ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಯುವ ಜನತೆ ನಿಷೇಧದ ಬಗ್ಗೆ ಅಭಿಯಾನ ಪ್ರಾರಂಭಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ನಮ್ಮಯುವ ಜಾನಂಗದಲ್ಲಿ ಸಾಮರ್ಥ್ಯ ವಿದೆ. ಅದನ್ನು ಗುರುತಿಸಿಕೊಳ್ಳಬೇಕು. ನಾಳೆಯ ಚಿಂತನೆ, ಯೋಜನೆ ಬಂದಲ್ಲಿ ಮಾತ್ರ ಯಶಸ್ಸು ಕಾಣಬಹುದು ಈ ಉಡುಪಿಯ ಕೃಷ್ಣನ ನಾಡಿನಲ್ಲಿ ಪಂಚವರ್ಣದ ಪ್ರಶಸ್ತಿ ಸ್ವೀಕರಿಸುವುದೇ ನನ್ನ ಭಾಗ್ಯವಾಗಿದೆ ಎಂದರು.

ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್ ದೊಡ್ಡಣ್ಣ ಮಾತನಾಡಿ
ಜಗತ್ತಿನಲ್ಲಿಯೇ ಕನ್ನಡ ಭಾಷೆಗೆ ಶ್ರೇಷ್ಠ ಸ್ಥಾನವಿದೆ. ರನ್ನ, ಪಂಪ, ನೃಪತುಂಗ ರಂತಹ ಅನೇಕ ಕವಿಮಹಾತ್ರಯರು ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ. 8 ಜ್ಜಾನ ಪೀಠ ಪುರಸ್ಕಾರವೂ ಕನ್ನಡ ಸಾಹಿತಿಗಳಿಗೆ ದೊರಕಿರುವುದು ಕನ್ನಡ ಭಾಷೆಯ ಮಹಿಮೆಯನ್ನು ಸಾರುತ್ತದೆ. ಪಂಚವರ್ಣ ಸಂಸ್ಥೆಯು ತಾಯಿ ಭಾಷೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಜತೆಗೆ ಸಮಾಜಮುಖಿ ಕಾರ್ಯವೇ ರಾಜ್ಯ ಹಾಗೂ ದೇಶಕ್ಕೆ ಮಾದರಿಯಾಗಿದೆ, ಎಂದು ಹಿರಿಯ ನಟ ದೊಡ್ಡಣ್ಣ ಹೇಳಿದರು.

ಇದೇ ವೇಳೆ ಪಂಚವರ್ಣ ರಾಜ್ಯೋತ್ಸವ ಪ್ರಶಸ್ತಿಯನ್ನು ವಿಶ್ವದ ಶ್ರೇಷ್ಠ ಉದ್ಯಮಿ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಇವರಿಗೆ ಹಿರಿಯ ನಟ ಎಸ್ ದೊಡ್ಡಣ್ಣ ಪ್ರದಾನಿಸಿದರು.
ಕಾರ್ಕಳದ ಸ್ವಚ್ಛ ಬ್ರಿಗೇಡ್ ಇವರಿಗೆ ವಿಶೇಷ ಪುರಸ್ಕಾರ,ವಿಶೇಷ ಅಭಿನಂದನೆಯನ್ನು ಯಕ್ಷಕಲಾ ಅಕಾಡೆಮಿ ಬೆಂಗಳೂರು ಇದರ ಮುಖ್ಯಸ್ಥ ಕೃಷ್ಣಮೂರ್ತಿ ತುಂಗ ಸ್ವೀಕರಿಸಿದರು.
ಪ್ರತಿಭಾ ಪುರಸ್ಕಾರದ ಭಾಗವಾಗಿ ಬಹುಮುಖ ಪ್ರತಿಭೆಗಳಾದ ಸುಶ್ಮಿತಾ ಕೃಷ್ಣಮೂರ್ತಿ ಸಾಲಿಗ್ರಾಮ, ಪ್ರಜ್ಞಾ ಗೀತಾ ಪೂಜಾರಿ ಹಂದಟ್ಟು ಇವರುಗಳಿಗೆ ನೀಡಲಾಯಿತು.
ಉಡುಪಿಯ ಹೊಸಬದುಕು ಆಶ್ರಮಕ್ಕೆ ದಿನಸಿ ಪರಿಕರ,ಅಶಕ್ತ ಅನಾರೋಗ್ಯ ಪೀಡಿತರಿಗೆ ,ವಿಶೇಷ ಚೇತನರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ದಿ. ಉದಯ ಪೂಜಾರಿ ಸ್ಮರಣಾರ್ಥ ಸಹಾಯಹಸ್ತ ನೀಡಲಾಯಿತು ಸ್ಥಳೀಯ ಕನ್ನಡ ಮಾಧ್ಯಮ ಶಾಲೆಗಳಿಗೆ ದತ್ತಿನಿಧಿ,ಅಂಗನವಾಡಿ ಶಾಲೆಗಳಿಗೆ ವಿವಿಧ ಪರಿಕರ ಹಸ್ತಾಂತರಿಸಿದರು.

ಕಾರ್ಯಕ್ರಮವನ್ನು ಸಮಾಜಸೇವಕ ಆನಂದ್ ಸಿ ಕುಂದರ್ ಉದ್ಘಾಟಿಸಿ ಶುಭಹಾರೈಸಿದರು.
ಸಮಾಜಸೇವಕ ಮುಂಬೈ ಒಎನ್‌ಜಿಸಿ ನಿವೃತ್ತ ಮಾನ್ಯೇಜರ್ ಬನ್ನಾಡಿ ನಾರಾಯಣ ಆಚಾರ್ ಶುಭಾಶಂಸನೆಗೈದರು. ಪಂಚವರ್ಣದ ಅಧ್ಯಕ್ಷ ಅಜಿತ್ ಅಚಾರ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಲಯನ್ಸ್ ಜಿಲ್ಲಾ ಮಾಜಿ ಗವರ್ನರ್ ಸುರೇಶ್ ಪ್ರಭು,ಮುಂಬೈ ಸಮಾಜಸೇವಕ ಉದ್ಯಮಿ ಬಡಾಮನೆ ರತ್ನಾಕರ್ ಶೆಟ್ಟಿ,ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಡಾ.ಬಿ ರಾಘವೇಂದ್ರ ಶೆಟ್ಟಿ, ಯಡಾಡಿ ಮತ್ಯಾಡಿಯ ಸುಜ್ಞಾನ ಏಜುಕೇಶನ್ ಟ್ರಸ್ಟ್ ಮುಖ್ಯಸ್ಥ ರಮೇಶ್ ಶೆಟ್ಟಿ, ಸೃಷ್ಠಿ ಇಂಜಿನಿಯರ್ ಮಣ ಪಾಲ ಇದರ ಇಂಜಿನಿಯರ್ ಜಯರಾಜ್ ವಿ. ಶೆಟ್ಟಿ, ಬೆಂಗಳೂರು ಉದ್ಯಮಿ ಕರುಣಾಕರ ಖಲಾಸೆ, ಸಾಂಸ್ಕೃತಿಕ ಚಿಂತಕ ಋಷಿರಾಜ್ ಸಾಸ್ತಾನ, ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ಪಂಚವರ್ಣ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್ ,ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣ ಗ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ,ಗೌರವಾಧ್ಯಕ್ಷೆ ಕುಸುಮ ದೇವಾಡಿಗ,ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿದರೆ,ಕಾರ್ಯಕ್ರಮವನ್ನು ಶಿಕ್ಷಕರಾದ ಸತೀಶ್ಚಂದ್ರ ಶೆಟ್ಟಿ, ಸಂತೋಷ್ ಕುಮಾರ್ ಕೋಟ ನಿರೂಪಿಸಿದರು.ಪಂಚವರ್ಣದ ಕಾರ್ಯದರ್ಶಿ ಸುಧೀಂದ್ರ ಜೋಗಿ ವಂದಿಸಿದರು.
ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಸಹರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಸ್ಥಳೀಯ ಕೋಟತಟ್ಟು ,ಮಣೂರು, ಕಾಸನಗುಂದು ಅಂಗನವಾಡಿ ಪುಟಾಣ ಗಳಿಂದ ನೃತ್ಯ ಸಿಂಚನ, ಪಂಚವರ್ಣ ಮಹಿಳಾ ಮಂಡಲ ಮಹಿಳೆಯರಿಂದ ಹಾಗೂ ಜಿಲ್ಲೆಯ ಪ್ರಸಿದ್ಧ ನೃತ್ಯ ತಂಡ ಕುಂಭಾಶಿಯ ಮಯೂರಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಲರವ, ಪಿಂಗಾರ್ ಕಲಾವಿದರ್ ಬಿದ್ರೆ ಇವರಿಂದ ಕದಂಬ ನಾಟಕ ಪ್ರದರ್ಶನ ನಡೆಯಿತು.