ಬಳ್ಳಾರಿಯಲ್ಲಿ ಯೂರಿಯಾ ಕಾಳಸಂತೆ: 4 ಸಾವಿರಕ್ಕೂ ಅಧಿಕ ಚೀಲ ಗೊಬ್ಬರ ವಶ

ಬಳ್ಳಾರಿ, ಫೆ.07:ಬಳ್ಳಾರಿಯಲ್ಲಿ ರೈತರಿಗೆ ತಲುಪಬೇಕಿದ್ದ ಯೂರಿಯಾ ಗೊಬ್ಬರವನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.

ಕೃಷಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಸಂಯುಕ್ತವಾಗಿ ದಾಳಿ ನಡೆಸಿ, ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಗೋಡೌನ್‌ನಿಂದ 4 ಸಾವಿರಕ್ಕೂ ಹೆಚ್ಚು ಚೀಲ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮುಂಗಾರು ಅವಧಿಯಲ್ಲಿ ಗೊಬ್ಬರಕ್ಕೆ ಹೆಚ್ಚುವರಿ ಬೇಡಿಕೆ ಇರುವುದನ್ನು ದುರುಪಯೋಗಪಡಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಯೂರಿಯಾ ಸಂಗ್ರಹಿಸಲಾಗಿತ್ತು.

ರೈತರಿಗೆ ವಿತರಿಸಬೇಕಾದ ಗೊಬ್ಬರವನ್ನು ಮಾರುಕಟ್ಟೆಗೆ ಬಿಡದೆ ಅಕ್ರಮವಾಗಿ ಕಾಳಸಂತೆಯಲ್ಲಿ ಮಾರಾಟ ಮಾಡುವ ಹುನ್ನಾರ ನಡೆಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಡೌನ್ ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ಈ ಅಕ್ರಮ ಸಂಗ್ರಹದ ಹಿಂದೆ ಇನ್ನೂ ಯಾರು ಭಾಗಿಯಾಗಿದ್ದಾರೆ ಎಂಬ ಕುರಿತು ತನಿಖೆ ಮುಂದುವರಿದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.