

ಡೈಲಿ ವಾರ್ತೆ: ಫೆ./06/2026
ವಿಶ್ವ ಕ್ಯಾನ್ಸರ್ ದಿನ: ಬೆಂಗಳೂರಿನಲ್ಲಿ ಸರ್ವೈಕಲ್ ಕ್ಯಾನ್ಸರ್ ಉಚಿತ ತಪಾಸಣೆ–ಚಿಕಿತ್ಸಾ ಅಭಿಯಾನ

ಬೆಂಗಳೂರು: ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದ ಆಶ್ರಯದಲ್ಲಿ ಬೆಂಗಳೂರಿನ ಗಾಂಧಿನಗರ ಶಾಖೆಯಿಂದ ಫೆಬ್ರವರಿ 4ರಂದು ಸರ್ವೈಕಲ್ ಕ್ಯಾನ್ಸರ್ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಅಖಿಲ ಭಾರತ ಥೇರಾ ಪಂಥ ಮಹಿಳಾ ಮಂಡಳದ ಲಕ್ಷ್ಮೀ ಬೋಹ್ರಾ ಈ ಕುರಿತು ಮಾಹಿತಿ ನೀಡಿ, ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ 21 ರಿಂದ 65 ವರ್ಷದ ವಯೋಮಿತಿಯ ಮಹಿಳೆಯರಿಗಾಗಿ ಈ ಅಭಿಯಾನ ನಡೆಸಲಾಗುತ್ತಿದೆ ಎಂದರು. ತಪಾಸಣೆ ಬಳಿಕ ಸರ್ವೈಕಲ್ ಕ್ಯಾನ್ಸರ್ ದೃಢಪಟ್ಟವರಿಗೆ ಉಚಿತ ಶಸ್ತ್ರಚಿಕಿತ್ಸೆ ಸೇರಿದಂತೆ ಅಗತ್ಯ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.
ನಗರದ ಉದ್ಯೋಗಸ್ಥ ಮಹಿಳೆಯರಲ್ಲಿ ಸರ್ವೈಕಲ್ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪರೀಕ್ಷೆ ಸರಳ, ಸುರಕ್ಷಿತ ಹಾಗೂ ನೋವುರಹಿತವಾಗಿದ್ದು, ಸ್ಥಳದಲ್ಲಿಯೇ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಸರ್ವೈಕಲ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಮನಗಂಡು ಕೇಂದ್ರ ಸರ್ಕಾರ ವಿಶೇಷ ಲಸಿಕಾ ಅಭಿಯಾನವನ್ನೂ ಆರಂಭಿಸಿದೆ. ರೋಗ ತಡೆಗಟ್ಟುವ ಜೊತೆಗೆ ಸಮಸ್ಯೆ ಹೊಂದಿರುವವರಿಗೆ ಸೂಕ್ತ ಚಿಕಿತ್ಸೆ ದೊರಕಿಸುವ ಉದ್ದೇಶ ಈ ಕಾರ್ಯಕ್ರಮದ ಮೂಲ ಆಶಯವಾಗಿದೆ ಎಂದು ಲಕ್ಷ್ಮೀ ಬೋಹ್ರಾ ಹೇಳಿದರು.
ಈ ಅಭಿಯಾನದ ರಾಯಭಾರಿಯಾಗಿ ನಟಿ ಸಂಜನಾ ಗುರ್ಲಾನಿ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ನಗರದಲ್ಲಿನ ಒಟ್ಟು 20 ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಿಜೇತ ಜೈನ್, ಸಂಚಾಲಕರಾದ ಇಂದು ಕಿನ್ವೇಸರ, ನೀತಾ ಗೋಡಿಯಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.