ಡೈಲಿ ವಾರ್ತೆ: ಫೆ./06/2026

ಕಾಂಗ್ರೆಸ್‌ನ ಹಿರಿಯ ನಾಯಕ ಜನಾರ್ದನ ಪೂಜಾರಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ; ಆರೋಗ್ಯ ವಿಚಾರಣೆ, ರಾಜಕೀಯ ಚರ್ಚೆ

ಬಂಟ್ವಾಳ: ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಬಂಟ್ವಾಳದ ನಿವಾಸಕ್ಕೆ ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಪುತ್ತೂರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಡಿಸಿಎಂ ಡಿಕೆಶಿ ಅವರು ಬಂಟ್ವಾಳಕ್ಕೆ ಆಗಮಿಸಿ ಜನಾರ್ದನ ಪೂಜಾರಿ ಅವರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತುಕತೆ ನಡೆಸಿದರು.

ರಾಜಕೀಯದಲ್ಲಿ ಅಪಾರ ಅನುಭವ ಹೊಂದಿರುವ ಜನಾರ್ದನ ಪೂಜಾರಿ ಅವರು ಸದಾ ಜನಪರ ಚಿಂತನೆಗಳೊಂದಿಗೆ ಕಾರ್ಯನಿರ್ವಹಿಸಿರುವ ಹಿರಿಯ ನಾಯಕರು. “ಜನಾರ್ದನ ಪೂಜಾರಿ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದದ್ದು ನನಗೆ ಅಪಾರ ಸಂತಸವನ್ನುಂಟು ಮಾಡಿದೆ” ಎಂದು ಡಿ.ಕೆ. ಶಿವಕುಮಾರ್ ಈ ಸಂದರ್ಭ ಹೇಳಿದರು.

ಈ ವೇಳೆ ಮಾಜಿ ಸಚಿವ ಬಿ. ರಮಾನಾಥ ರೈ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಇನಾಯತ್ ಅಲಿ, ಬೇಬಿ ಕುಂದರ್, ಹರೀಶ್ ಕುಮಾರ್, ಪದ್ಮರಾಜ್ ಆರ್. ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.