ಡೈಲಿ ವಾರ್ತೆ: ಫೆ./06/2026

ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆ: ಅಸಹಜ ಸಾವು ಪ್ರಕರಣ ದಾಖಲು

ಬಂಟ್ವಾಳ, ಫೆ.06: ಬಂಟ್ವಾಳ ತಾಲೂಕಿನ ಬಿ ಮೂಡ ಗ್ರಾಮದ ಗೂಡಿನಬಳಿ ಕಂಚಿಕಾರ ಸೇತುವೆ ಸಮೀಪ ನೇತ್ರಾವತಿ ನದಿಯಲ್ಲಿ ಯುವಕನೊಬ್ಬನ ಮೃತದೇಹ ಗುರುವಾರ ಸಂಜೆ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ವೀರಕಂಭ ಗ್ರಾಮದ ಬಾಯಿಲ ನಿವಾಸಿ ಪ್ರಕಾಶ್ ಪೂಜಾರಿ (34) ಎಂದು ಗುರುತಿಸಲಾಗಿದೆ. ಅವರು ಕೂಲಿ ಕಾರ್ಮಿಕರಾಗಿದ್ದು, ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದರೆಂದು ತಿಳಿದುಬಂದಿದೆ.

ಮೃತನು ಫೆಬ್ರವರಿ 4ರಂದು ರಾತ್ರಿ ಸುಮಾರು 10 ಗಂಟೆಗೆ ತನ್ನ ತಾಯಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದನು. ಅದರ ಬಳಿಕ ಫೆಬ್ರವರಿ 5ರಂದು ಸಂಜೆ ಸುಮಾರು 6 ಗಂಟೆ ವೇಳೆಗೆ ನೇತ್ರಾವತಿ ನದಿಯಲ್ಲಿ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ. ಮಾಹಿತಿ ತಿಳಿದ ಸ್ಥಳೀಯ ಈಜುಗಾರ ಯುವಕರ ತಂಡ ನದಿಯಿಂದ ಮೃತದೇಹವನ್ನು ಮೇಲಕ್ಕೆತ್ತಿದೆ.

ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತರ ಸಹೋದರಿ ಶ್ರೀಮತಿ ಭಾರತಿ ಅವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.