ಡೈಲಿ ವಾರ್ತೆ:07/DEC/2024
ಮಣಿಪಾಲ : ಈಶ್ವರನಗರದ ಪಂಪ್ ಹೌಸ್‌ಗೆ ನುಗ್ಗಿದ ಕಾರು – ಪ್ರಯಾಣಿಕರು ಪಾರು!
ಮಣಿಪಾಲ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಈಶ್ವರ ನಗರದಲ್ಲಿರುವ ಕುಡಿಯುವ ನೀರಿನ ಪಂಪ್ ಹೌಸಿಗೆ ಢಿಕ್ಕಿ ಹೊಡೆದ ಘಟನೆ ಡಿ. 7 ರಂದು ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಮಣಿಪಾಲದಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯ ಪಂಪ್ ಹೌಸ್‌ಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಮಣಿಪಾಲದಿಂದ ಈಶ್ವರ ನಗರದ ವರೆಗೆ ಕಾಂಕ್ರೀಟ್ ರಸ್ತೆ ಇದ್ದು ನಂತರ ಮಣ್ಣಿನ ರಸ್ತೆ ಇರುವುದರಿಂದ ದೂರದ ಊರಿನಿಂದ ಬರುವ ವಾಹನ ಚಾಲಕರಿಗೆ ಒಮ್ಮೆಗೆ ದಿಕ್ಕು ತಪ್ಪಿದಂತಾಗುತ್ತದೆ. ಇದರ ಪರಿಣಾಮ ಇಲ್ಲಿ ಹಲವು ಅಪಘಾತಗಳು ಸಂಭವಿಸಿವೆ.
ಇಲ್ಲಿ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿದ್ದಾರೆ. ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಇಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯ ಬೇಕು. ಹಳೆಯ ರಸ್ತೆಯನ್ನಾದರೂ ಮುಂದುವರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಹಲವು ಬಾರಿ ಗಮನ ಸೆಳೆದರೂ ನಗರಸಭೆ ಪಂಪ್ ಹೌಸಿಗೆ ಯಾವುದೇ ಭದ್ರತೆ ಒದಗಿಸಿಲ್ಲ ಮತ್ತು ಗೋಡೆಯನ್ನೂ ನಿರ್ಮಿಸಿಲ್ಲ. ಈ ಮೂಲಕ ಇಲ್ಲಿ ಯಾವುದೇ ಸುರಕ್ಷಿತ ಕ್ರಮ ಕೈಗೊಂಡಿಲ್ಲ. ಈ ಜಾಗದಲ್ಲಿ ಪದೇ ಪದೇ ವಾಹನಗಳು ಅಪಘಾತಕ್ಕೆ ಒಳಗಾಗಲು ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ ಹಾಗೂ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.