ಡೈಲಿ ವಾರ್ತೆ:07/DEC/2024
ಜೆಮ್ ಶಾಲಾ ರಜತಮಹೋತ್ಸವ: ಕೌಶಲ್ಯ ಮತ್ತು ಮೌಲ್ಯಯುತ ಶಿಕ್ಷಣವು ಸಮಾಜ ಪರಿವರ್ತನೆಗೆ ಅಗತ್ಯ – ಸಭಾಧ್ಯಕ್ಷ ಯು.ಟಿ. ಖಾದರ್
ಬಂಟ್ವಾಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನವಪೀಳಿಗೆಯು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಾದರೆ ಅವರಿಗೆ ಕೌಶಲ್ಯಭರಿತ ಮತ್ತು ಮೌಲ್ಯಯುತವಾದ ಶಿಕ್ಷಣ ನೀಡುವ ಅಗತ್ಯವಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.
ಅವರು ಗೋಳ್ತಮಜಲು ಜೆಮ್ ಪಬ್ಲಿಕ್ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು . ಬಡತನ, ನಿರುದ್ಯೋಗ, ಅಸಮಾನತೆ ಇವೇ ಮೊದಲಾದ ಪಿಡುಗುಗಳಿಗೆ ಗುಣಮಟ್ಟದ ಶಿಕ್ಷಣವು ಒಂದು ಅತ್ಯುತ್ತಮ ಪರಿಹಾರ ಕ್ರಮವಾಗಿದ್ದು ಅಂತಹ ಗುಣಮಟ್ಟದ ಶಿಕ್ಷಣವನ್ನು ಕಳೆದ ಇಪ್ಪತ್ತೈದು ವರ್ಷಗಳಿಂದ ನೀಡುತ್ತಾ ಬಂದಿರುವ ಜೆಮ್ ಶಾಲೆಯ ಯಶಸ್ಸಿನ ಹಾದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳ್ಳಿಹಬ್ಬದ ಪ್ರಯುಕ್ತ ಹೊರತರಲಾದ ರಜತರತ್ನ ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಬಿಡುಗಡೆಗೊಳಿಸಿ , ಜೆಮ್ ಶಿಕ್ಷಣ ಸಂಸ್ಥೆಯ ಸ್ಥಾಪಕ ದಿವಂಗತ ಗೋಳ್ತಮಜಲು ಅಬ್ದುಲ್ ಖಾದರ್ ಹಾಜಿಯವರ ಶಿಕ್ಷಣ ಪ್ರೇಮ ಮತ್ತು ಅವರ ಸಾಮಾಜಿಕ ಕಳಕಳಿಯನ್ನು ಸ್ಮರಿಸಿದರು.
ಮೀಫ್ ಸಂಸ್ಥೆಯ ದಕ್ಕಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಜೋಕಟ್ಟೆ , ರಜತ ಮಹೋತ್ಸವದ ಫಲಕವನ್ನು ವೈಜ್ಞಾನಿಕವಾಗಿ ಅನಾವರಣಗೋಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯಾಸೀರ್ ಕಲ್ಲಡ್ಕ ಅವರ ವಸ್ತುಪ್ರಪರ್ಶನವನ್ನು ಉದ್ಘಾಟನೆಯನ್ನು ಉಧ್ಯಮಿ ರೊನಾಲ್ಡ್ ಮಾರ್ಟಿಸ್ ಅವರು ನೆರವೇರಿಸಿದರು. ಫಾತಿಮಾ ಮೆಮೋರಿಯಲ್ ಎಜುಕೇಷನ್ ಟ್ರಸ್ಟಿನ ಅಧ್ಯಕ್ಷ ಅಬೂಬಕ್ಕರ್ ಹಾಜಿ ಗೋಳ್ತಮಜಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗೋಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ ಪುರುಷೋತ್ತಮ್, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ. ಜಿ , ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಪದ್ಮನಾಭ ರೈ , ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ವೇಳೆ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಮೊಹಮ್ಮದ್ ಹನೀಫ್ ಹಾಜಿ , ರೊನಾಲ್ಡ್ ಮಾರ್ಟಿಸ್, ಮೊಹಮ್ಮದ್ ಯಸೀರ್ ಅವರನ್ನು ಸನ್ಮಾನಿಸಲಾಯಿತು
ಟ್ರಸ್ಟಿಗಳಾದ ಅಬ್ದುಲ್ ರಝಾಕ್ ಹಾಜಿ , ಮೊಹಮ್ಮದ್ ಶರೀಫ್ ಹಾಜಿ, ಮೊಹಮ್ಮದ್ ಯೂಸುಫ್ ಹಾಜಿ, ಮೊಹಮ್ಮದ್ ಅಲ್ತಾಫ್ ಹಾಜಿ, ಶಾಕಿರ್ ಇಸ್ಮಾಯಿಲ್ ಹಾಜಿ , ಇಮ್ತಿಯಾಝ್ ಅಹಮದ್ ಹಾಜಿ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಹಮೀದ್ ಅಲಿ, ಉಪಾಧ್ಯಕ್ಷೆ ಪುಷ್ಪ ಸತೀಶ್, ಮಾಜಿ ಸಂಚಾಲಕ ಜಿ.ಕೆ. ಅಬ್ದುಲ್ ಹಮೀದ್ ಗೂಡಿನಬಳಿ, ವಿದ್ಯಾರ್ಥಿಗಳ ಸುರಕ್ಷಾ ಸಮಿತಿಯ ಸದಸ್ಯ ಅಬ್ದುಲ್ ಹಮೀದ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಸ್ಮರಣ ಸಂಚಿಕೆಯ ಕುರಿತು ಮಾತನಾಡಿದರು. ಶಿಕ್ಷಕಿ ನಾಝಿಯಾ ಸ್ವಾಗತಿಸಿದರು. ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಮೊಹಮ್ಮದ್ ಹನೀಫ್ ಹಾಜಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಶಿಕ್ಷಕ ನಿರಂಜನ್ ಡಿ. ಧನ್ಯವಾದಗೈದರು. ಟ್ರಸ್ಟಿ ಅಹಮದ್ ಮುಸ್ಥಾಪಾ ಕಾರ್ಯಕ್ರಮ ನಿರೂಪಿಸಿದರು.