ಡೈಲಿ ವಾರ್ತೆ:08/DEC/2024

ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ, ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಅದ್ದೂರಿ ವಾರ್ಷಿಕೋತ್ಸವ – ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಶಾಲೆ ಉತ್ತಮ ವೇದಿಕೆ – ಗಣಪತಿ ಕೆ.

ಕುಂದಾಪುರ: ದೇಶದ ಭಾವಿ ಪ್ರಜೆಗಳಾದ ಮಕ್ಕಳ ಭವಿಷ್ಯ ಅರಳುವುದು ಶಾಲೆಗಳಲ್ಲಿ. ಮಕ್ಕಳಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ಶಾಲೆ ಉತ್ತಮ ವೇದಿಕೆಯಾಗಿದೆ. ಮಕ್ಕಳು ಶಾಲಾ ಕಲಿಕೆಯಲ್ಲಿ ಉತ್ತಮ ಅಂಕಗಳಿಸಿ ಗೌರವಗಳನ್ನ, ಬಹುಮಾನಗಳನ್ನು ಸಂಪಾದಿಸಿದಾಗ ಪೋಷಕರಿಗಾಗುವ ಹೆಮ್ಮೆ ವಿವರಿಸಲಾಗದು. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಅತ್ಯುತ್ತಮ ಶಿಕ್ಷಣವನ್ನು ನೀಡುವ ಶಾಲೆಗಳಲ್ಲಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯು ಒಂದು. ಈ ಶಾಲೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ನಿರ್ವಹಣೆಯನ್ನು ತೋರುತ್ತಾ ಉಡುಪಿ ಜಿಲ್ಲೆಯ ಅಗ್ರಗಣ್ಯ ಶಾಲೆಗಳಲ್ಲಿ ಒಂದಾಗಿರುವುದು ಹೆಮ್ಮೆಯ ವಿಚಾರ. ಭವಿಷ್ಯದಲ್ಲಿ ಈ ಶಾಲೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸುವಂತಾಗಲಿ. ಉತ್ತಮ ಪ್ರತಿಭೆಗಳು ಈ ಶಾಲೆಯಿಂದ ಹೊರಹೊಮ್ಮಲಿ ಎಂದು ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಡಿ.ಡಿ.ಪಿ.ಐ. ಗಣಪತಿ ಕೆ ಹೇಳಿದರು. ಇವರು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಸುಜ್ಞಾನ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ” ವರ್ಷಾ 2024″ ರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ನಿವೃತ್ತ ಪ್ರಾಂಶುಪಾಲರು ಶ್ರೀಯುತ ಗಣನಾಥ್ ಎಕ್ಕಾರ್ ಮಾತನಾಡುತ್ತಾ “ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಕಲಿಯುವುದು ಅತ್ಯಗತ್ಯ. ಬಾಲ್ಯದಲ್ಲಿಯೇ ಮಕ್ಕಳು ಉತ್ತಮ ಶಿಸ್ತನ್ನು ಕಲಿತರೆ ಮುಂದೆ ಉತ್ತಮ ಪ್ರಜೆಯಾಗಲು ಸಾಧ್ಯವಾಗುತ್ತದೆ. ಮಕ್ಕಳು ಶಿಸ್ತು ಮತ್ತು ಉತ್ತಮ ಗುಣಗಳನ್ನು ಬೆಳಸಿಕೊಂಡರೆ ಮುಂದೆ ಉತ್ತಮ ಗೌರವಗಳನ್ನು ಸಂಪಾದಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಥಮ ದರ್ಜೆ ಗುತ್ತಿಗೆದಾರರಾದ ಚಂದ್ರಶೇಖರ್ ಶೆಟ್ಟಿ ಮಾತನಾಡುತ್ತಾ “ಗ್ರಾಮೀಣ ಭಾಗದಲ್ಲಿ ಆರಂಭವಾಗಿರುವ ವಿದ್ಯಾರಣ್ಯ ಶಾಲೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಹೆಸರು ಮಾಡುತ್ತಿದೆ. ಈ ಪರಿಸರದ ಮಕ್ಕಳ ಸುಂದರ ಭವಿಷ್ಯಕ್ಕೆ ಈ ಶಾಲೆಯು ಸಹಕಾರಿಯಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಮಾತನಾಡುತ್ತಾ ಗ್ರಾಮೀಣ ಮಕ್ಕಳಿಗೆ ಉನ್ನತ ವ್ಯಾಸಂಗ ಮತ್ತು ಉತ್ಕೃಷ್ಟ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶದಿಂದ ನಮ್ಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದು ಮಕ್ಕಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಈಗಾಗಲೇ ನಮ್ಮ ಸಂಸ್ಥೆಯು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಜಿಲ್ಲಾಮಟ್ಟದಲ್ಲಿ ಮತ್ತು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಮಕ್ಕಳ ಆಸಕ್ತಿದಾಯಕ ಕಲಿಕೆ ಮತ್ತು ಸರ್ವಾಂಗೀಣ ಪ್ರಗತಿಗೆ ಪೂರಕವಾದ ಉತ್ತಮ ಶಿಕ್ಷಣವನ್ನು ನಮ್ಮ ಸಂಸ್ಥೆ ನೀಡುತ್ತಿದೆ ಎಂದರು.

ವೇದಿಕೆಯಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಯುತ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಶ್ರೀಯುತ ಭರತ್ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕಲಿಕೆ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಕಳೆದ ಸಾಲಿನಲ್ಲಿ ಜೆ.ಇ. ಇ. ಮತ್ತು ನೀಟ್ ವಿಭಾಗದಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಿಸಲಾಯಿತು.

ಪೋಷಕರು ಮತ್ತು ಸ್ಥಳೀಯರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವೈಭವದ ವಾರ್ಷಿಕ ಸಂಭ್ರಮದ ಕಾರ್ಯಕ್ರಮವನ್ನು ಕಣ್ತುಂಬಿಸಿಕೊಂಡರು.
ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಪ್ರದೀಪ್ ಕೆ ವಾರ್ಷಿಕ ವರದಿ ವಾಚಿಸಿದರು. ಶಿಕ್ಷಕ ಸತೀಶ್ ಕುಮಾರ್ ಮತ್ತು ಉಪನ್ಯಾಸಕಿ ಸಂಗೀತ ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕಿ ಸಪ್ತಮಿ ಸ್ವಾಗತಿಸಿ, ಸುಜ್ಞಾನ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಂಜನ್ ಬಿ ಶೆಟ್ಟಿ ವಂದಿಸಿದರು.
ಶಿಕ್ಷಕಿ ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.