ಡೈಲಿ ವಾರ್ತೆ:08/DEC/2024
ಮಧುವನ ಶಾಲೆ: ಅಮೃತ ಮಹೋತ್ಸವ ಹಳೆ ವಿದ್ಯಾರ್ಥಿ ಕ್ರೀಡಾಕೂಟಕ್ಕೆ ಚಾಲನೆ – ಮಧುವನದ ಮಣ್ಣಿನಲ್ಲಿ ಕ್ರೀಡೆಗೆ ವಿಶೇಷ ಮಹತ್ವವಿದೆ – ಜೀವನ ಕುಮಾರ್ ಶೆಟ್ಟಿ
ಕೋಟ: ವಿವೇಕಾನಂದ ಹಿ.ಪ್ರಾ. ಶಾಲೆ ಮಧುವನ – ಅಚ್ಲಾಡಿಯ ಅಮೃತ ಮಹೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಮಧುರಾಮೃತ ಕಾರ್ಯಕ್ರಮ ಡಿಸೆಂಬರ್ – 28 ಮತ್ತು 29ರಂದು ಜರಗಲಿದ್ದು ಈ ಪ್ರಯುಕ್ತ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಡಿ.8ರಂದು ಚಾಲನೆ ನೀಡಲಾಯಿತು.
ದೈಹಿಕ ಶಿಕ್ಷಣ ನಿರ್ದೇಶಕ ಜೀವನ್ ಕುಮಾರ್ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಧುವನ ಮಣ್ಣಿಗೂ ಕ್ರೀಡೆಗೂ ಅವಿನಾಭವ ನಂಟಿದೆ. ಇಲ್ಲಿನ ಶಾಲೆ ಹಾಗೂ ಯುವಕ ಮಂಡಲದ ಮೂಲಕ ನೂರಾರು ರಾಜ್ಯ ಮಟ್ಟ ಪ್ರತಿನಿಧಿಸಿದ ವಾಲಿಬಾಲ್ ಪಟುಗಳು ಹೊರಹೊಮ್ಮಿದ್ದಾರೆ. ಶಾಲೆಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನಕ್ಕಾಗಿ ಈ ರೀತಿಯ ಕಾರ್ಯಕ್ರಮ ಆಯೋಜಿಸಿರುವುದು ಖುಷಿಯ ವಿಚಾರವಾಗಿದೆ ಎಂದರು.
ಈ ಸಂದರ್ಭ ಕ್ರಿಕೆಟ್, ವಾಲಿಬಾಲ್, ಮಹಿಳೆಯರಿಗೆ ತ್ರೋ ಬಾಲ್, ಬಾಂಬ್ ಇನ್ ಡಿ ಸಿಟಿ ಪಂದ್ಯಾಟ ನಡೆಯಿತು.
ಮುಖ್ಯ ಶಿಕ್ಷಕ ಲಚ್ಚು ನಾಯಕ್ ಅವರು ಅಮೃತ ಮಹೋತ್ಸವ ಕಾರ್ಯಕ್ರಮದ ರೂಪುರೇಷೆ ಬಗ್ಗೆ ತಿಳಿಸಿದರು. ಅಮೃತ ಮಹೋತ್ಸವ ಸಮಿತಿಯ ಪ್ರಮುಖರಾದ ರಾಜಾರಾಮ್ ಶೆಟ್ಟಿ, ಸುರೇಂದ್ರ ಶೆಟ್ಟಿ ಕೊಮೆ, ಡಾ.ರವಿರಾಜ್ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ನವೀನ್ ಶೆಟ್ಟಿ,ದೈಹಿಕ ಶಿ.ಶಿಕ್ಷಕ ಸುಭಾಷ್ ನಾಯ್ಕ್, ಅಶ್ವಥ್ ಶೆಟ್ಟಿ, ಅಮೃತ ಮಹೋತ್ಸವ ಸಮಿತಿ ಸದಸ್ಯರು, ಶಿಕ್ಷಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ರೀಡಾಕೂಟದ ಎರಡನೇ ಹಂತದ ಸ್ಪರ್ಧೆಗಳು ಡಿ.15 ರಂದು ನಡೆಯಲಿದ್ದು ಅಂದು ಓಟಗಳು, ಗುಂಡು ಎಸೆತ, ಉದ್ದ ಜಿಗಿತ, ರಿಲೇ,ಹಗ್ಗ ಜಗ್ಗಾಟ ನಡೆಯಲಿದೆ.