ಡೈಲಿ ವಾರ್ತೆ:08/DEC/2024
✒️ ಓಂಕಾರ ಎಸ್. ವಿ. ತಾಳಗುಪ್ಪ
ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ ಸದಾನಂದ ಶರ್ಮಾ ಆಯ್ಕೆ
ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಕಸ್ತೂರಿಯವರು ಕಾರಣಾಂತರಗಳಿಂದ ಪದತ್ಯಾಗ ಮಾಡಿದುದರಿಂದ ಈ ದಿನ ಶಿವಮೊಗ್ಗ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ ಮಂಜುನಾಥರವರು ಸಾಗರದಲ್ಲಿ ಸಭೆ ನಡೆಸಿದರು.
ಈ ಸಭೆಯಲ್ಲಿ ಶಿವಮೊಗ್ಗ ಜಿಲ್ಲೆ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾದ ನಿವೃತ್ತ ತಹಶೀಲ್ದಾರ್ ಧರ್ಮೋಜಿರಾವ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿ.ಟಿ. ಸ್ವಾಮಿ ಮತ್ತಿತರ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದ್ದರು.
ಇಂದಿನ ಸಭೆಯಲ್ಲಿ ನಡೆದ ಚರ್ಚೆಗಳ ನಂತರ ಜಿಲ್ಲಾಧ್ಯಕ್ಷರು ನೂತನ ಅಧ್ಯಕ್ಷರಾಗಿ ಸಾಗರದ ಪ್ರಜ್ಞಾ ಭಾರತಿ ವಿದ್ಯಾ ಮಂದಿರದ ಮುಖ್ಯಸ್ಥ ಸದಾನಂದ ಶರ್ಮಾ ಅವರನ್ನು ಆಯ್ಕೆಮಾಡಿರುವುದಾಗಿ ಘೋಷಿಸಿದರು.
ಸದಾನಂದ ಶರ್ಮಾ ಯಾರು.? ಇವರ ಸಾಧನೆ ಎಷ್ಟೆಲ್ಲ ಗೊತ್ತಾ.? ಸದಾನಂದ ಶರ್ಮ ಇವರು ಮೂಲತಃ, ಸಾಗರ ತಾಲೂಕಿನ ಇಡುವಾಣಿಯವರು. ಸಾಗರದ ಪ್ರಮುಖ ನಗರವಾದ ಎಸ್ ಎನ್ ನಗರದಲ್ಲಿ ಪ್ರಜ್ಞಾ ಭಾರತಿ ಎನ್ನುವ ವಿದ್ಯಸಂಸ್ಥೆ ನೆಡೆಸುತಿದ್ದಾರೆ.
ಇವರ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ನಾಟಕ, ಯಕ್ಷಗಾನ, ಜನಪದ ತರಬೇತಿ ಸೇರಿದಂತೆ ಇತರೆ ಸಾಂಸ್ಕೃತಿಕ ಸೊಗಡಿನ ತರಬೇತಿಯನ್ನು ನೀಡಲಾಗುತ್ತಿದೆ.
ಕನ್ನಡದ ಬಗ್ಗೆ ವಿಷೇಶವಾಗಿ ಆಸಕ್ತಿ ಹೊಂದಿರುವ ಇವರು ಬರೆದ ಎರಡು ಪದ್ಯಗಳನ್ನು ಕೇಂದ್ರ ಪಠ್ಯಕ್ರಮದಲ್ಲಿ ಕನ್ನಡ ಕಲಿಯುವ ಮಕ್ಕಳಿಗೆ ಪಠ್ಯವಾಗಿ ಇಡಲಾಗಿದೆ. ಇವರು ಬರೆದ ಕೆಳದಿಯ ಅರಸರ ಕಥೆಗಳು ಮತ್ತು ಸರಿಯದಿರು ಇರುಳೇ ಎಂಬ ಅದ್ಭುತ ಕವನಗಳನ್ನು ಐಸಿಎಸ್ಇ ಮಕ್ಕಳು ಹತ್ತು ಮತ್ತು ಹನ್ನೆರಡನೆಯ ತರಗತಿಗಳ ಮಕ್ಕಳು ಕಲಿಯುತ್ತಿದ್ದಾರೆ.
ಇದೀಗ ಕನ್ನಡಮ್ಮನ ತೇರು ಏಳೆಯುವ ಬಹುದೊಡ್ಡ ಜವಾಬ್ದಾರಿಯನ್ನು ಇವರ ಹೆಗಲಿಗೆ ವಹಿಸಲಾಗಿದೆ. ಸಾಗರ ತಾಲ್ಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದು ಮುಂಬರಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನ ಹಾಗೂ ವಿವಿಧ ಕಮ್ಮಟ ಕಾರ್ಯಾಗಾರಗಳನ್ನು ನಡೆಸಲಿದ್ದಾರೆ.
ಇವರು ಸಾಹಿತ್ಯ ಕೃಷಿಯಲ್ಲಿ ನೂರಾರು ಶಿಶುಗೀತೆಗಳನ್ನು, ನಾಟಕಗಳನ್ನು, ಹತ್ತಿಪ್ಪತ್ತು ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ ಶ್ರೀಯುತರು ಮೂರ್ನಾಲ್ಕು ದಶಕಗಳಿಂದ ಮಕ್ಕಳಿಗೆ ಪಾಠ ಮಾಡುವ ಉತ್ತಮ ಶಿಕ್ಷಕರೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇನ್ನಾದರೂ ಸಾಗರ ನಗರದಲ್ಲಿ ಇವರು ತಾಲ್ಲೂಕಿನಲ್ಲಿ ಕನ್ನಡದ ಕೆಲಸ ಮಾದರಿಯಾಗಿ ನಡೆಯಲಿ ಎಂಬುದು ಕನ್ನಡಾಸಕ್ತರ ಆಸೆಯಾಗಿದೆ. ಸುದ್ದಿ ಸಾಗರದ ಆಶಯವಾಗಿದೆ.