ಡೈಲಿ ವಾರ್ತೆ:09/DEC/2024
ಬಿಡದಿ ಪೊಲೀಸರ ನಿರ್ಲಕ್ಷ್ಯ: ಮಂಚನಾಯಕನಹಳ್ಳಿಯಲ್ಲಿ ಹೆಚ್ಚಾದ ಕಳ್ಳತನ ಪ್ರಕರಣ
ಬಿಡದಿ : ಇಲ್ಲಿನ ಮಂಚನಾಯಕನಹಳ್ಳಿಗೆ ಸೇರಿದ ಹನುಮಂತ ನಗರದ ಬಳಿ ಕಳ್ಳರು, ಪೋಲಿ ಪುಂಡರ ಅಟ್ಟಹಾಸಗಳು ಪ್ರತಿನಿತ್ಯ ಹೆಚ್ಚಾಗುತ್ತಿದೆ. ಈ ಬಗ್ಗೆ ಪೊಲೀಸರ ಗಮನಕ್ಕೆ ತಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಕಳೆದ ಒಂದು ವರ್ಷಗಳಲ್ಲಿ ನಿರಂತರವಾಗಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಸಾರ್ವಜನಿಕರು ಚಿಂತೆಗಿಡಾಗಿದ್ದು, ಈ ಬಗ್ಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.
ಇನ್ನು ಈ ಹಿಂದೆಯೂ ಕೂಡ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಹಲವು ಬಾರಿ ಮನೆ ಕಳ್ಳತನ ಪ್ರಕರಣಗಳು ಕೂಡ ಕೇಳಿ ಬಂದಿವೆ. ಹೀಗಾಗಿ ಹಲವು ವರ್ಷಗಳಿಂದಲೂ ಕೂಡ ಹನುಮಂತನಗರ ನಿವಾಸಿಗಳು ಕಳ್ಳತನದ ಭೀತಿಯನ್ನು ಎದುರಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ಕಳೆದ ಒಂದು ವರ್ಷಗಳಿಂದ ಮತ್ತೆ ಕಳ್ಳತನದ ಪ್ರಕರಣಗಳಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡಿರುವುದು ನಿವಾಸಿಗಳು ಇಲ್ಲಿ ವಾಸಿಸಲು ಕೂಡ ಭಯಪಡುವಂತಾಗಿದೆ
ಹೆಚ್ಚಾದ ವಾಹನ ಕಳ್ಳತನ: ಲಭ್ಯ ಮಾಹಿತಿಯ ಪ್ರಕಾರ ಕಳೆದ ಒಂದು ವರ್ಷದಿಂದ ವಾಹನ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳೇ ಕಳ್ಳರ ಗುರಿಯಾಗಿದ್ದು ಮಧ್ಯರಾತ್ರಿಯ ಹೊತ್ತಿನಲ್ಲಿ ವಾಹನಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಹಲವರು ತಮ್ಮ ವಾಹನಗಳನ್ನು ಕಳೆದುಕೊಂಡು ತಿಂಗಳುಗಳೇ ಕಳಿದರು ಪೊಲೀಸರು ಯಾವುದೇ ರೀತಿಯ ಕಟ್ಟುನಿಟಿನ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಕೆಲವು ಮಾಹಿತಿಗಳ ಪ್ರಕಾರ ವಾಹನ ಕಳ್ಳತನ ಪ್ರಕರಣಗಳನ್ನು ಭೇದಿಸಲು ಪೊಲೀಸರು ತೀವ್ರವಾದ ನಿರ್ಲಕ್ಷವನ್ನು ವಹಿಸುತ್ತಿದ್ದು, ಇದುವರೆಗೂ ಪೊಲೀಸರು ಯಾವುದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿಲ್ಲ, ಹನುಮಂತನಗರದಲ್ಲಿ ಪೊಲೀಸರು ಒಂದೇ ಒಂದು ಗಸ್ತು
ನಿರ್ವಹಣೆ ಮಾಡುವುದಿಲ್ಲ ಇದರಿಂದ ನಿವಾಸಿಗಳು ತಮ್ಮ ರಕ್ಷಣೆಯನ್ನು ತಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮ ಪಂಚಾಯಿತಿ ಸದಸ್ಯರುಗಳು ನಿರ್ಲಕ್ಷ್ಯ: ಒಂದು ಕಡೆ ಪೊಲೀಸರ ನಿರ್ಲಕ್ಷವೂ ಹೆಚ್ಚಾದರೆ ಮತ್ತೊಂದು ಕಡೆ ಮಂಚನಾಯಜನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರ ನಿರ್ಲಕ್ಷವು ಹೆಚ್ಚಾಗಿದೆ. ಗ್ರಾಮದಲ್ಲಿ ಒಂದೇ ಒಂದು ಕಾರ್ಯ ನಿರ್ವಹಿಸುವ ಸಿಸಿಟಿವಿಗಳು ಇಲ್ಲದಿರುವುದು ಕಳ್ಳತನ ಪ್ರಕರಣ ಹೆಚ್ಚಾಗುವಂತೆ ಮಾಡಿದೆ. ನಿವಾಸಿಗಳ ಭದ್ರತೆಗೆ ಯಾವುದೇ ರೀತಿಯ ಕ್ರಮವನ್ನು ತೆಗೆದುಕೊಳ್ಳದಿರುವುದು ಇಲ್ಲಿನ ಗ್ರಾಮ ಪಂಚಾಯಿತಿ ಸದಸ್ಯರ ನಿರ್ಲಕ್ಷ್ಯ ಏನು ಎಂಬುದನ್ನು ಸಾಬೀತುಪಡಿಸಿದೆ.
ಇನ್ನು ಸಿಸಿಟಿವಿ ಕ್ಯಾಮೆರಾಗಳ ಕುರಿತು ಗ್ರಾಮ ಪಂಚಾಯತಿ ಸದಸ್ಯರುಗಳನ್ನ ನಿವಾಸಿಗಳು ಪ್ರಶ್ನಿಸಿದರೆ ನಿವಾಸಿಗಳೇ ಸಿಸಿಟಿವಿಯನ್ನು ಅಳವಡಿಸಬೇಕು ಎಂದು ಮೊಂಡು ವಾದವನ್ನು ಸದಸ್ಯರು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗಾಗಿ ಸಾರ್ವಜನಿಕರು ಕೂಡ ಚುನಾವಣೆಯ ಸಂದರ್ಭದಲ್ಲಿ ಮತಗಳನ್ನು ಕೇಳಲು ಬರುವಾಗ ನಾವು ಪಾಠ ಕಲಿಸುತ್ತೇವೆ ಎಂದು ಕಿಡಿ ಕಾರಿದ್ದಾರೆ.
ಒಟ್ಟಾರೆಯಾಗಿ ಮಂಚನಾಯಕನಹಳ್ಳಿಯ ಗ್ರಾಮ ಪಂಚಾಯಿತಿಯ ಸದಸ್ಯರ ನಿರ್ಲಕ್ಷ್ಯ ಮತ್ತು ಬಿಡದಿ ಪೊಲೀಸರ ಬೇಜವಾಬ್ದಾರಿತನದಿಂದಾಗಿ ಇಂದು ಮಂಚನಾಯಕನಹಳ್ಳಿಯಲ್ಲಿ ವಾಹನ ಕಳ್ಳತನ, ಮನೆಗಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.