ಡೈಲಿ ವಾರ್ತೆ:25/DEC/2024

ಭಟ್ಕಳ: ಮುರಿನಕಟ್ಟೆಯಲ್ಲಿ ಶ್ರೀ ಮಾರಿಕಾಂಬೆ ದೇವಿಯ ಮರದ ಗೊಂಬೆ ನಾಪತ್ತೆ – ಸ್ಥಳೀಯರಿಂದ ಭಾರಿ ಆಕ್ರೋಶ

ಭಟ್ಕಳ : ಶ್ರೀ ಮಾರಿಕಾಂಬೆ ಅಮ್ಮನವರ ಹೊರೆ ತೆಗೆಯುವ ವೇಳೆಯಿದ್ದ ದೇವಿಯ ಮರದ ಗೊಂಬೆ ನಾಪತ್ತೆ ಆಗಿರುವಂತಹ ಘಟನೆ ಭಟ್ಕಳ ತಾಲೂಕಿನ ವಿವಾದಿತ ಸ್ಥಳವಾದ ಮುರಿನಕಟ್ಟೆಯಲ್ಲಿ ನಡೆದಿದೆ.

ಕೆಲವು ದಿನಗಳ ಹಿಂದೆ ಆಸರಕೇರಿಯ ಜನರು ವನದುರ್ಗಿ ದೇವಸ್ಥಾನದ ಬಳಿಯಿದ್ದ ಅಮ್ಮನ ಹೊರೆ ಸಾಗಿಸಿದ್ದರು. ಅಲ್ಲದೇ, ಶಂಸುದ್ದೀನ್ ಸರ್ಕಲ್ ಬಳಿಯಿದ್ದ 2 ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿ, ಪೂಜೆ ಸಲ್ಲಿಸಿ ಬಂದಿದ್ದರು. ಕಾರ್ಗದ್ದೆ, ಹುರುಳಿಸಾಲ, ಕಡವಿನಕಟ್ಟೆ ಹಾಗೂ ರಂಗಿನಕಟ್ಟೆಯ ಗ್ರಾಮಸ್ಥರು ಪರಿಶೀಲಿಸಿದಾಗ ಬೊಂಬೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಸದ್ಯ ವಿಷಯ ಎಲ್ಲೆಡೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾಯಿಸಿ ಕೆಲ ಕಾಲ ಆತಂಕ ಸೃಷ್ಟಿ ಆಗಿತ್ತು. ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಕೆಲವು ಹೊತ್ತು ಸ್ಥಳೀಯರಿಗೂ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿದೆ.

ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ. ಸ್ಥಳೀಯ ಹಿಂದೂ ಮುಖಂಡ ಗೋವಿಂದ ನಾಯ್ಕರಿಗೆ ಜಿಲ್ಲಾ ಎಸ್​​ಪಿ ಎಂ.ನಾರಾಯಣ್ ಕರೆ ಮಾಡಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಅಮ್ಮನರ ಹೊರೆಯನ್ನು ವಾಹನದಲ್ಲಿ ತುಂಬಿ ವೆಂಕಟಾಪುರ ಗಡಿಭಾಗಕ್ಕೆ ಸ್ಥಳೀಯರು ತಲುಪಿಸಿದ್ದಾರೆ.