ಡೈಲಿ ವಾರ್ತೆ:29/DEC/2024
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ 5ಕ್ಕೆ ಏರಿಕೆ
ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತೀವ್ರವಾಗಿ ಗಾಯಗೊಂಡು ಕಿಮ್ಸ್ಗೆ ದಾಖಲಾಗಿದ್ದ ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದಾರೆ.
ಶಂಕರ್ ಚವ್ಹಾಣ್ (29) ಮೃತ ಅಯ್ಯಪ್ಪ ಮಾಲಾಧಾರಿ ಎಂದು ತಿಳಿದು ಬಂದಿದೆ.
ಮೃತರ ಸಂಖ್ಯೆ ಒಟ್ಟು 5ಕ್ಕೆ ಏರಿಕೆಯಾಗಿದೆ. ನಾಲ್ವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಹುಬ್ಬಳ್ಳಿಯ ಉಣಕಲ್ ನಿವಾಸಿಯಾಗಿದ್ದ ಶಂಕರ್ ಚವ್ಹಾಣ್, ಕಿಮ್ಸ್ ಆಸ್ಪತ್ರೆಯಲ್ಲಿ ಕಳೆದ 13 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ವಾರ್ಡ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಶಂಕರ್ ಚವ್ಹಾಣ್ ಬಾಲ್ಯದಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ದೊಡ್ಡಮ್ಮನ ಆರೈಕೆಯಲ್ಲಿ ಬೆಳೆದಿದ್ದರು. ಶಂಕರ್ ಚವ್ಹಾಣ್ ಮೊದಲ ಬಾರಿ ಅಯ್ಯಪ್ಪನ ಮಾಲೆ ಧರಿಸಿದ್ದರು. ಹುಬ್ಬಳ್ಳಿಯ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಡಿಸೆಂಬರ್ 22ರಂದು ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ತೀರ್ವವಾಗಿ ಗಾಯಗೊಂಡಿದ್ದರು.
ಶಂಕರ್ ಚವ್ಹಾಣ್ಗೆ ಕಳೆದ ಏಳು ದಿನಗಳಿಂದ ಕಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶಂಕರ್ ಚವ್ಹಾಣ್ ಶನಿವಾರ ಮಧ್ಯರಾತ್ರಿ ಕೊನೆಯುಸಿರು ಎಳೆದಿದ್ದಾರೆ. ಶವಗಾರಾದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಸಾಯಿನಗರದ ಅಚ್ಚವ್ವಳ ಕಾಲೋನಿಯಲ್ಲಿ ಕಳೆದ ಭಾನುವಾರ ರಾತ್ರಿ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಒಟ್ಟು 9 ಮಂದಿ ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. 9 ಮಂದಿಯಲ್ಲಿ ಐವರು ಅಯ್ಯಪ್ಪ ಮಾಲಾಧಾರಿಗಳು ಮೃತಪಟ್ಟಿದ್ದಾರೆ.
ನಿಜಲಿಂಗಪ್ಪ ಬೇಪುರಿ (58), ಸಂಜಯ್ ಸವದತ್ತಿ (20), ರಾಜು ಮೂಗೇರಿ (21), ಲಿಂಗಾರಾಜು ಬೀರನೂರ (24), ಶಂಕರ್ ಚವ್ಹಾಣ್ (29) ಮೃತ ದುರ್ದೈವಿಗಳು. ಇನ್ನುಳಿದ ನಾಲ್ವರು ಅಯ್ಯಪ್ಪ ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರೆದಿದೆ.