ಡೈಲಿ ವಾರ್ತೆ: 09/JAN/2025

ತಿರುಪತಿ ತಿಮ್ಮಪ್ಪನ ಟಿಕೆಟ್​ಗಾಗಿ ನೂಕುನುಗ್ಗಲು|ಕಾಲ್ತುಳಿತದಲ್ಲಿ ಐವರು ಮಹಿಳೆಯರು ಸೇರಿ 6 ಭಕ್ತರು ಸಾವು

ತಿರುಪತಿ| ವೈಕುಂಠ ಏಕಾದಶಿಗೂ ಮುನ್ನ ತಿರುಪತಿಯಲ್ಲಿ ಭೀಕರ ದುರಂತ ನಡೆದಿದೆ. ವೈಕುಂಠದ್ವಾರ ಸರ್ವದರ್ಶನದ ಟಿಕೆಟ್​​ ವಿತರಣಾ ಕೇಂದ್ರಗಳಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಎರಡು ಸ್ಥಳಗಳಲ್ಲಿ ನಡೆದ ಕಾಲ್ತುಳಿತದಲ್ಲಿ ಐವರು ಮಹಿಳಾ ಭಕ್ತರು ಸೇರಿ 6 ಮಂದಿ ಸಾವಿಗೀಡಾಗಿದ್ದಾರೆ. 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸರ್ವದರ್ಶನ ಟಿಕೆಟ್​​ಗಾಗಿ ಭಕ್ತರು ವಿತರಣಾ ಕೇಂದ್ರಗಳತ್ತ ಒಮ್ಮೆಲೇ ನುಗ್ಗಿ ಬಂದ ಕಾರಣ, ಕಾಲ್ತುಳಿತ ಉಂಟಾಗಿದೆ. ಇದರಿಂದ ಹಲವು ಭಕ್ತರು ಕೆಳಗೆ ಬಿದ್ದು ಗಾಯಗೊಂಡಿದ್ದಾರೆ. ಮೃತ ಭಕ್ತರಲ್ಲಿ ತಮಿಳುನಾಡಿನ ಸೇಲಂ ಮೂಲದ ಮಹಿಳೆ ಕೂಡ ಇದ್ದಾರೆ.

ಘಟನೆ ವಿವರ: 10, 11 ಮತ್ತು 12 ರಂದು ವೈಕುಂಠ ಏಕಾದಶಿ ನಿಮಿತ್ತ ಗುರುವಾರ ಬೆಳಗ್ಗೆ 5 ಗಂಟೆಯಿಂದ ವೈಕುಂಠದ್ವಾರ ಸರ್ವದರ್ಶನಕ್ಕೆ ಟಿಕೆಟ್​ ನೀಡಲಾಗುವುದು ಎಂದು ಟಿಟಿಡಿ ಪ್ರಕಟಿಸಿತ್ತು. ಸಾಗರೋಪಾದಿಯಲ್ಲಿ ಬಂದಿರುವ ಭಕ್ತರು ಟಿಕೆಟ್​ಗಾಗಿ ಕಾದು ಕುಳಿತಿದ್ದರು. ಹೆಚ್ಚಿನ ಭಕ್ತರು ಬಂದ ಹಿನ್ನೆಲೆಯಲ್ಲಿ ಟಿಟಿಡಿ ನಿಗದಿತ ಸಮಯಕ್ಕಿಂತ ಮೊದಲೇ ಅಂದರೆ ಇಂದೇ ಟಿಕೆಟ್​ ನೀಡಲು ಕೌಂಟರ್​ ತೆರೆದಿದೆ. ಈ ವೇಳೆ ಭಕ್ತರು ಟಿಕೆಟ್​ ಪಡೆದುಕೊಳ್ಳಲು ಕೌಂಟರ್​ಗಳತ್ತ ನುಗ್ಗಿ ಬಂದಿದ್ದಾರೆ. ಈ ವೇಳೆ ಭಾರೀ ಕಾಲ್ತುಳಿತ ಉಂಟಾಗಿದೆ.

ಎಲ್ಲ ಭಕ್ತರನ್ನು ಟಿಕೆಟ್​ ಕೌಂಟರ್​​ನ ಹೊರಭಾಗದಲ್ಲಿ ನಿಲ್ಲಿಸಲಾಗಿತ್ತು. ಬಳಿಕ ಎಲ್ಲರೂ ಸರತಿ ಸಾಲಿನಲ್ಲಿ ಬರಲು ಸಿಬ್ಬಂದಿ ಸೂಚಿಸಿದ್ದಾರೆ. ಈ ವೇಳೆ ಭಕ್ತರು ಏಕಾಏಕಿ ಧಾವಿಸಿ ಬಂದಿದ್ದಾರೆ. ಇದರಿಂದ ಮಹಿಳೆಯರು, ಹಿರಿಯರು ಜನಸಂದಣಿಯಲ್ಲಿ ಸಿಲುಕಿಕೊಂಡಿದ್ದಾರೆ.

ಕಾಲ್ತುಳಿತದಲ್ಲಿ ಸಿಲುಕಿದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಆಂಬ್ಯುಲೆನ್ಸ್​ ಮೂಲಕ ರವಾನಿಸಲಾಗಿದೆ. ಆದರೆ, ಅದರಲ್ಲಿ ಚಿಕಿತ್ಸೆ ಫಲಿಸದೆ ಐವರು ಮಹಿಳೆಯರು ಮತ್ತು ಓರ್ವ ಪುರುಷ ಸಾವಿಗೀಡಾಗಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ವ್ಯವಸ್ಥೆ ಕೊರತೆ : ಟಿಕೆಟ್​ ನೀಡುವ ಮುನ್ನ ಕೌಂಟರ್​ಗಳಲ್ಲಿ ಯಾವುದೇ ವ್ಯವಸ್ಥೆ ಮಾಡಿಲ್ಲ. ಭದ್ರತೆಯನ್ನೂ ನೀಡಿಲ್ಲ. ಹೀಗಾಗಿ ನೂಕುನುಗ್ಗಲು ಉಂಟಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷ್ಣುನಿವಾಸ, ಬೈರಾಗಿಪಟ್ಟೆಡ ರಾಮಾನಾಯ್ಡು ಶಾಲೆ, ಸತ್ಯನಾರಾಯಣಪುರದ ಟಿಕೆಟ್​ ವಿತರಣಾ ಕೇಂದ್ರದಲ್ಲೂ ನೂಕುನುಗ್ಗಲು ಉಂಟಾಗಿದೆ. ಇಲ್ಲಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಟೋಕನ್ ವಿತರಣೆ ಪ್ರಾರಂಭ : ಗುರುವಾರ ಬೆಳಗ್ಗೆಯಿಂದ ದಿನಕ್ಕೆ 40 ಸಾವಿರದಂತೆ 3 ದಿನಗಳಲ್ಲಿ 1 ಲಕ್ಷದ 20 ಸಾವಿರ ದರ್ಶನ ಟಿಕೆಟ್​ ನೀಡಲು ಟಿಟಿಡಿ ನಿರ್ಧರಿಸಿತ್ತು. ಆದರೆ, ಬುಧವಾರ ಸಂಜೆಯಿಂದಲೇ ಭಕ್ತರು ಸಾಲುಗಟ್ಟಿ ನಿಂತಿದ್ದರು. ಇದರಿಂದ 9 ಕಡೆಗಳಲ್ಲಿ 90 ಕೌಂಟರ್‌ಗಳ ಮೂಲಕ ಸರ್ವದರ್ಶನ ಟಿಕೆಟ್​​ ವಿತರಿಸಲು ಟಿಟಿಡಿ ವ್ಯವಸ್ಥೆ ಮಾಡಿದೆ.