ಡೈಲಿ ವಾರ್ತೆ: 31/JAN/2025

ಉದ್ಯಾವರ: ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು: ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿ

ಕಾಪು: ಮನೆಯ ಬೀಗ ಮುರಿದು ಒಳನುಗ್ಗಿ 116 ಪವನ್ ತೂಕದ ಚಿನ್ನಾಭರಣಗಳ ಸಹಿತ ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ದೋಚಿ ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಉದ್ಯಾವರ ಗುಡ್ಡೆಯಂಗಡಿ ಯಲ್ಲಿ ನಡೆದಿದೆ.

ರೇಷ್ಮಾ ಎನ್ನುವ ಮಹಿಳೆ 15 ವರ್ಷಗಳಿಂದ ಉದ್ಯಾವರ ಗ್ರಾಮದ ಗುಡ್ಡೆಯಂಗಡಿಯಲ್ಲಿರುವ ಚಂದ್ರಕಾಂತ್ ಅವರಿಗೆ ಸೇರಿದ ಮನೆಯ ಮೊದಲ ಮಹಡಿಯಲ್ಲಿ ಬಾಡಿಗೆಗೆ ವಾಸ ಮಾಡಿಕೊಂಡಿದ್ದು, ಮನೆಯ ನೆಲಮಹಡಿಯಲ್ಲಿ ಮನೆಯ ಮಾಲಿಕರು ವಾಸವಿದ್ದರು. ಮನೆ ಮಾಲಕರು ಜ.14ರಂದು ಮುಂಬಯಿಗೆ ಹೋಗಿದ್ದು, ರೇಷ್ಮಾ ಅವರು ಮಗಳ ಜತೆಗೆ ಜ. 25ರಂದು ಪರ್ಕಳದಲ್ಲಿರುವ ಗಂಡನ ಮನೆಗೆ ತೆರಳಿದ್ದರು.

ಜ. 29ರಂದು ಸಂಜೆ 5.30ಕ್ಕೆ ಉದ್ಯಾವರದ ಮನೆಗೆ ಬಂದಾಗ ಮನೆಯ ಮುಖ್ಯ ಬಾಗಿಲು ತೆರೆದಿದ್ದು, ಒಳಗಡೆ ಹೋಗಿ ನೋಡಿದಾಗ ಮಲಗುವ ಕೋಣೆಯಲ್ಲಿದ್ದ ಮೂರು ಕಪಾಟುಗಳು ತೆರೆದಿದ್ದು, ಅದರೊಳಗಿದ್ದ 116 ಪವನ್ ಚಿನ್ನದ ಆಭರಣಗಳು, 100 ಗ್ರಾಂನಷ್ಟು ಬೆಳ್ಳಿಯ ದೇವರ ಸಾಮಗ್ರಿಗಳು ಹಾಗೂ 30 ಸಾವಿರ ರೂಪಾಯಿ ಕಳವಾಗಿರುವ ಬೆಳಕಿಗೆ ಬಂದಿದೆ.

ಜ. 25 ರಿಂದ ಜ. 29ರ ನಡುವಿನ ಅವಧಿಯಲ್ಲಿ ಕಳ್ಳರು ಮನೆಯ ಮುಖ್ಯ ಬಾಗಿಲನ್ನು ಬಲವಂತವಾಗಿ ಮುರಿದು, ತೆರೆದು ಒಳಪ್ರವೇಶಿಸಿ ಮಲಗುವ ಕೋಣೆಯ ಬಾಗಿಲದ ಕೀಯನ್ನು ಮುರಿದು ಕಪಾಟಿನಲ್ಲಿದ್ದ ನಗದು ಹಣ, ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ರೇಷ್ಮಾ ನೀಡಿರುವ ದೂರಿನಂತೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಚ್‌. ಸಿದ್ಧಲಿಂಗಪ್ಪ, ಡಿವೈಎಸ್ಪಿ ಅರವಿಂದ ಕಲಗುಜ್ಜಿ, ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ, ಎಸ್ಐ ತೇಜಸ್ವಿ, ಶ್ವಾನದಳ, ಬೆಳರಚ್ಚು, ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.