


ಡೈಲಿವಾರ್ತೆ: 21/ನ./2026




ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ: ಕ್ರೀಡೆಯಿಂದ ಆತ್ಮಸ್ಥೈರ್ಯ ವೃದ್ಧಿ – ಡಾ. ಗಜಾನನ ಪ್ರಭು

ಕೋಟೇಶ್ವರ: ಕ್ರೀಡೆಯು ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯವನ್ನು ವೃದ್ಧಿಸುವುದರ ಜತೆಗೆ ಮಾನಸಿಕ ದೃಢತೆ, ಆತ್ಮವಿಶ್ವಾಸ ಹಾಗೂ ಶಿಸ್ತು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ತಾಳ್ಮೆ, ತ್ಯಾಗ ಮತ್ತು ಸಹಕಾರ ಕ್ರೀಡೆಯ ಪ್ರಮುಖ ಮೌಲ್ಯಗಳಾಗಿದ್ದು, ಕ್ರೀಡಾಕೂಟಗಳು ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಹೆಚ್ಚಿಸುತ್ತವೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ಗಜಾನನ ಪ್ರಭು ಬಿ. ಅಭಿಪ್ರಾಯಪಟ್ಟರು.

ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ನವೆಂಬರ್ 21ರಂದು ನಡೆದ 21ನೇ ಶೈಕ್ಷಣಿಕ ವರ್ಷದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಕ್ರೀಡೆಯು ಕೇವಲ ದೈಹಿಕ ಚಟುವಟಿಕೆಗೆ ಸೀಮಿತವಾಗದೆ, ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಸದೃಢತೆಯೂ ವೃದ್ಧಿಯಾಗುತ್ತದೆ. ಸೋಲಿನಿಂದ ಹತಾಶರಾಗದೆ, ಗೆಲುವಿನಿಂದ ಅಹಂಕಾರ ಪಡದೆ ಕ್ರೀಡಾಸ್ಫೂರ್ತಿಯನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು.
ಕ್ರೀಡೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಶಿಸ್ತು, ತಾಳ್ಮೆ ಮತ್ತು ಪರಸ್ಪರ ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಎನ್ಸಿಸಿ ಕೆಡೆಟ್ಗಳಿಂದ ಆಕರ್ಷಕ ಪಥಸಂಚಲನ, ವಿದ್ಯಾರ್ಥಿಗಳಿಂದ ಏರೋಬಿಕ್ಸ್ ಹಾಗೂ ಕರಾಟೆ ಪ್ರದರ್ಶನ ನಡೆಯಿತು. ಈ ಪ್ರದರ್ಶನಗಳನ್ನು ವೀಕ್ಷಿಸಿದ ಡಾ. ಗಜಾನನ ಪ್ರಭು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬಾಂಡ್ಯಾ ಎಜುಕೇಶನಲ್ ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕ ಕೆ. ಸುಭಾಶ್ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಟ್ರಸ್ಟ್ನ ಜಂಟಿ ಕಾರ್ಯನಿರ್ವಾಹಕಿ ಅನುಪಮ ಎಸ್. ಶೆಟ್ಟಿ ಗೌರವ ಉಪಸ್ಥಿತರಿದ್ದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸಂದೀಪ್ ನಾಯ್ಕ್ ಉಪಸ್ಥಿತರಿದ್ದರು.
ಗುರುಕುಲ ಪಬ್ಲಿಕ್ ಸ್ಕೂಲ್ನ ಪ್ರಾಂಶುಪಾಲೆ ಡಾ. ರೂಪಾ ಶೆಣೈ ಸ್ವಾಗತಿಸಿದರು. ಬಬಿತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು.
ಕೀರ್ತಿ ಶೆಟ್ಟಿ ಹಾಗೂ ಪ್ರಿಯಾಂಕ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ವಂದಿಸಿದರು.

