ಡೈಲಿ ವಾರ್ತೆ: 06/ಮಾರ್ಚ್ /2025

ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಭ್ರಷ್ಟರ ಬೇಟೆ: ಬೆಳಗಾವಿ, ಬೆಂಗಳೂರು ಸೇರಿದಂತೆ ಹಲವೆಡೆ ಲೋಕಾಯುಕ್ತ ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಂಗಳೂರು, ಕೋಲಾರ, ಕಲಬುರಗಿ, ದಾವಣಗೆರೆ, ತುಮಕೂರು, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. 8 ಮಂದಿ ಭ್ರಷ್ಟ ಅಧಿಕಾರಿಗಳ ನಿವಾಸ, ಕಚೇರಿಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಂಗಳೂರಿನ ಡಿಪಿಎಆರ್ ಚೀಫ್ ಇಂಜಿನಿಯರ್ ಟಿ.ಡಿ.ನಂಜುಡಪ್ಪ, ಬಿಬಿಎಂಪಿಯ ಎಕ್ಸಿಕ್ಯೂಟಿವ್​ ಇಂಜಿನಿಯರ್​ ಹೆಚ್​. ಬಿ. ಕಲ್ಲೇಶಪ್ಪ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಕೋಲಾರದಲ್ಲಿರುವ ಬೆಸ್ಕಾಂ ಎಇಇ ಜಿ.ನಾಗರಾಜ್​, ಕಲಬುರಗಿ ಲೋಕೋಪಯೋಗಿ ಚೀಫ್ ಇಂಜಿನಿಯರ್ ಜಗನ್ನಾಥ್, ದಾವಣಗೆರೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಜಿಲ್ಲಾ ಸಂಖ್ಯಾಶಾಸ್ತ್ರೀಯ ಅಧಿಕಾರಿ ಜಿ.ಎಸ್. ನಾಗರಾಜು, ತುಮಕೂರಿನಲ್ಲಿ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಜಗದೀಶ್ ಅವರ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ.

ಕೋಲಾರದಲ್ಲಿ ಬೆಸ್ಕಾಂ ಎಇಇ ಜಿ.ನಾಗರಾಜ್ ಮನೆ ಹಾಗೂ ಅವರಿಗೆ ಸೇರಿದ ಮೂರು ಕಡೆ ದಾಳಿ ನಡೆದಿದೆ. ನಾಗರಾಜ್ ಪ್ರಸ್ತುತ ಬೆಂಗಳೂರು ರಾಜಾಜಿನಗರ ಎಇಇ ಬೆಸ್ಕಾಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾಗರಾಜ್ ಅವರ ನಿವಾಸ, ಕೆ.ಆರ್.ಪುರಂ ಬಳಿಯ ಪ್ರಿಯದರ್ಶಿನಿ ಬಡಾವಣೆಯಲ್ಲಿನ ಮನೆ, ರಾಜಾಜಿನಗರ ಬೆಸ್ಕಾಂ ಕಚೇರಿ, ಅವರ ಸಂಬಂಧಿಕರೊಬ್ಬರ ಮನೆ ಮೇಲೆ ದಾಳಿ ನಡೆದಿದೆ.

ಬಾಗಲಕೋಟೆಯಲ್ಲಿ ಪಂಚಾಯತ್ ರಾಜ್ ಇಲಾಖೆ ಅಕೌಂಟೆಂಟ್ ಮಲ್ಲೇಶ್​ ಅವರ ಬಾಗಲಕೋಟೆ ಕಚೇರಿ, ಬೀಳಗಿ ತಾಲೂಕಿನ ತಳ್ಳಿಕೇರಿ ಮನೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ನಡೆಯುತ್ತಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆ ಲೋಕಾಯುಕ್ತ ಡಿವೈಎಸ್​ಪಿ ಸಿದ್ದೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

ವಿಜಯಪುರದಲ್ಲಿ ಕರ್ನಾಟಕ ಗೃಹ ಮಂಡಳಿ ಎಫ್‌ಡಿಎ ಶಿವಾನಂದ ಕೆಂಬಾವಿ ಅವರ ಮನೆ ಮತ್ತು ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರುವ ನಿವಾಸ ಮತ್ತು ವಿಜಯಪುರ ಜಿಲ್ಲೆ ತಿಡಗುಂದಿ ಗ್ರಾಮದ ಬಳಿಯಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಲೋಕಾಯುಕ್ತ ಎಸ್ಪಿ ಡಿ. ಮಲ್ಲೇಶ್ ನೇತೃತ್ವದಲ್ಲಿ ಡಿವೈಎಸ್ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕಣ್ಣನವರ್ ಸೇರಿದಂತೆ ಅಧಿಕಾರಿಗಳ ತಂಡ ಈ ದಾಳಿಯನ್ನು ನಡೆಸಿದೆ.

ಕಲಬುರಗಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಯ ಸೆಕ್ರೆಟರಿ ಇನ್ ಚೀಫ್ ಜಗನ್ನಾಥ್ ಹಲಿಂಗೆ ಅವರ ಮನೆ ಮೇಲೆ ಈ ದಾಳಿ ನಡೆದಿದೆ. ಕಲಬುರಗಿ ನಗರದ ಓಕಳಿ ಕ್ಯಾಂಪ್ ಬಡಾವಣೆಯಲ್ಲಿರುವ ಮನೆ, ಬೆಂಗಳೂರಿನ ಕಚೇರಿ, ಧನ್ನೂರ್ (ಕೆ) ಗ್ರಾಮದಲ್ಲಿರುವ ಮನೆ ಸೇರಿದಂತೆ ಒಟ್ಟು 3 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬೀಳಗಿ ಪಂಚಾಯತ್ ರಾಜ್ ಇಲಾಖೆಯ ಅಕೌಂಟೆಂಟ್ ಮಲ್ಲೇಶ್ ದುರ್ಗದ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಬಾಗಲಕೋಟೆ ಹಳೆ ವೀರಾಪುರ ರಸ್ತೆಯಲ್ಲಿರುವ ಮನೆ, ಮಲ್ಲೇಶ್ ಅವರ ಸ್ವಗ್ರಾಮ ತಳ್ಳಿಕೇರಿಯಲ್ಲಿರುವ ಮನೆ ಸೇರಿದಂತೆ ಒಟ್ಟು 3 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದ ತಂಡ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.