


ಡೈಲಿ ವಾರ್ತೆ: 15/ಏಪ್ರಿಲ್/2025


ಡೀಸೆಲ್ ಬೆಲೆ ಏರಿಕೆ, ಟೋಲ್ ಶುಲ್ಕ ಹೆಚ್ಚಳ ಖಂಡಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಲಾರಿ ಮುಷ್ಕರ ಆರಂಭ

ಬೆಂಗಳೂರು: ಡಿಸೇಲ್ ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಬೆಳಗ್ಗೆ 6 ರಿಂದ ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಸಂಘಟನೆಗಳ ನಡುವೆಯೇ ಒಡಕು ಮೂಡಿದೆ.
ಎರಡು ಬಣಗಳ ಮಧ್ಯೆ ಭಿನ್ನಾಭಿಪ್ರಾಯ: ರಾಜ್ಯ ಮಾಲೀಕರ ಸಂಘದ ಅಧ್ಯಕ್ಷ .ಜಿ.ಆರ್. ಷಣ್ಮುಗಪ್ಪ ನೇತೃತ್ವದ ಬಣ ಮುಷ್ಕರ ಆರಂಭಿಸಿದರೆ, ಮತ್ತೊಂದೆಡೆ ಲಾರಿ ಓನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಚನ್ನಾರೆಡ್ಡಿ ನೇತೃತ್ವದ ಬಣವು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಎರಡು ಬಣಗಳ ನಡುವಿನ ತಿಕ್ಕಾಟದಿಂದಾಗಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ್ಯವಾಗುವ ಸಾಧ್ಯತೆಯಿದೆ.
ಡಿಸೇಲ್ ಬೆಲೆ 2 ರೂಪಾಯಿ ಏರಿಸಿರುವುದು, ಟೋಲ್ ಬೆಲೆ ಹೆಚ್ಚಳ ಮಾಡಿರುವುದನ್ನ ಖಂಡಿಸಿ ಬೆಳಗ್ಗೆಯಿಂದ ಮುಷ್ಕರ ಆರಂಭವಾಗಲಿದೆ. ಈ ಸಂಬಂಧ ಮಾತನಾಡಿರುವ ಷಣ್ಮುಗಪ್ಪ ಹಲವು ಬಾರಿ ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮುಷ್ಕರದ ದಾರಿ ಹಿಡಿದಿದ್ದೇವೆ. ಈ ಮುಷ್ಕರ ರಾಜಕೀಯ ಪ್ರೇರಿತವಲ್ಲ. ಕೆಲವರು ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಆಸ್ಪದ ನೀಡುವುದಿಲ್ಲ. ನಿಗದಿಯಂತೆ ಲಾರಿ ಮುಷ್ಕರ ಆರಂಭಿಸಲಾಗಿದೆ ಎಂದರು.
ಮುಷ್ಕರಕ್ಕೆ ನಮ್ಮ ವಿರೋಧ: ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಲಾರಿ ಓನರ್ಸ್ ಅಸೋಸಿಯೇಷನ್ ಗೌರವಾಧ್ಯಕ್ಷ ಚನ್ನಾರೆಡ್ಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ಲಾರಿಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ. ಈ ಮುಷ್ಕರಕ್ಕೆ ನಮ್ಮ ಬೆಂಬಲವಿಲ್ಲ, ರಾಜ್ಯದ ಎಲ್ಲ ಜಿಲ್ಲಾ ಲಾರಿ ಮಾಲೀಕರ ಸಂಘಗಳೂ ನಮ್ಮ ಪರವಾಗಿವೆ,” ಎಂದಿದ್ದಾರೆ.
ಮುಷ್ಕರದ ಬಗ್ಗೆ ಆರಂಭದಿಂದಲೂ ಜಂಟಿ ಸಭೆ ನಡೆಸುವುದು ಅಭ್ಯಾಸವಾಗಿದೆ. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಈ ಸಭೆಗಳನ್ನು ನಮ್ಮೊಂದಿಗೆ ಮಾಡುತ್ತಿಲ್ಲ. ಡಿಸೇಲ್ ಬೆಲೆ ಏರಿಕೆ ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ. ವಿವಿಧ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಡಿಸೇಲ್ ಬೆಲೆ ಕಡಿಮೆಯಿದೆ ಎಂದು ಚನ್ನಾರೆಡ್ಡಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.