

ಡೈಲಿ ವಾರ್ತೆ: ಫೆ./07/2026
ನೀರು ಸರಬರಾಜು ಸ್ಥಗಿತಕ್ಕೆ ಆಕ್ರೋಶ: ಐರೋಡಿ ಗ್ರಾಮಸ್ಥರಿಂದ ಪಂಚಾಯತ್‌ಗೆ ಮುತ್ತಿಗೆ

ಸಾಸ್ತಾನ, ಫೆ. 7:ಕಳೆದ ಎರಡು ದಿನಗಳಿಂದ ಕುಡಿಯುವ ನೀರು ಸರಬರಾಜು ಸ್ಥಗಿತಗೊಂಡಿರುವುದನ್ನು ಖಂಡಿಸಿ ಐರೋಡಿ ಎರಡನೇ ವಾರ್ಡ್‌ನ ಹೊಳೆಬದಿ ಗ್ರಾಮಸ್ಥರು ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ನೀರಿನ ಕೊರತೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ತಕ್ಷಣ ಸಮಸ್ಯೆ ಪರಿಹರಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಗ್ರಾಮ ಪಂಚಾಯತ್‌ನ ಪಂಪ್ ಆಪರೇಟರ್ ಕೃಷ್ಣ ಎಂಬುವವರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಗೈರಾಗುತ್ತಿರುವುದೇ ನೀರು ಸರಬರಾಜು ಸ್ಥಗಿತಕ್ಕೆ ಪ್ರಮುಖ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದರು. ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗದೆ ಮನಬಂದಂತೆ ರಜೆ ಹಾಕುತ್ತಿರುವುದರಿಂದ ನೀರು ಬಿಡಲಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಮಾತನಾಡಿದ ಪಂಚಾಯತ್ ಸದಸ್ಯರಾದ ಶಿವರಾಮ್ ಶ್ರೀಯಾನ್ ಹಾಗೂ ನಟರಾಜ್ ಗಾಣಿಗ, ಪಂಪ್ ಆಪರೇಟರ್‌ಗೆ ಹಲವು ಬಾರಿ ಅವಕಾಶ ನೀಡಿದರೂ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಈ ಹಿನ್ನೆಲೆ ಹಿಂದಿನ ಸಾಮಾನ್ಯ ಸಭೆಯಲ್ಲಿ ಅವರನ್ನು ಸೇವೆಯಿಂದ ತೆರವುಗೊಳಿಸಿ ಹೊಸ ಪಂಪ್ ಆಪರೇಟರ್ ನೇಮಕ ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಅವರು ಅವರನ್ನು ಮುಂದುವರಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ ಸಂತ್ರಸ್ತ ಮಹಿಳೆಯೊಬ್ಬರು ಮಾತನಾಡಿ, “ನಮ್ಮ ಪ್ರದೇಶದಲ್ಲಿ ಕುಡಿಯುವುದಕ್ಕೂ ನೀರಿಲ್ಲ. ಬಾವಿಗಳಲ್ಲೂ ಉಪ್ಪು ನೀರು ಬರುತ್ತಿರುವುದರಿಂದ ಪಂಚಾಯತ್ ನೀರನ್ನೇ ಅವಲಂಬಿಸಬೇಕಾಗಿದೆ. ಮಕ್ಕಳಿಗೆ ಕುಡಿಯಲು ಒಂದು ತೊಟ್ಟು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಮಾಸವೂ ಬಿಲ್ಲು ಸಂಗ್ರಹಿಸಲು ಮಾತ್ರ ಸಮಯಕ್ಕೆ ಬರುತ್ತಾರೆ. ನೀರು ಕೇಳಿದರೆ ಅವಾಚ್ಯ ಹಾಗೂ ಉಢಾಫೆಯ ಉತ್ತರ ನೀಡುತ್ತಾರೆ” ಎಂದು ಪಂಪ್ ಆಪರೇಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಂಚಾಯತ್ ಕಾರ್ಯದರ್ಶಿ ವಿಜಯಕುಮಾರಿ ಮಾತನಾಡಿ, ಪಂಪ್ ಆಪರೇಟರ್ ಕೃಷ್ಣ ಅವರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಬರುವುದರಿಂದಲೇ ಈ ಸಮಸ್ಯೆಗಳು ಉಂಟಾಗುತ್ತಿವೆ. ಈ ಬಗ್ಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿದೆ. ಅವರ ಕುಟುಂಬಸ್ಥರು ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರಿಂದ ಈವರೆಗೆ ಮುಂದುವರಿಸಲಾಗಿದೆ. ಆದರೆ ಅವರು 15 ದಿನ ಕೆಲಸಕ್ಕೆ ಬಂದು ಮತ್ತೆ 15 ದಿನ ಗೈರಾಗುತ್ತಿರುವುದು ಮುಂದುವರಿದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾತ್ಕಾಲಿಕವಾಗಿ ಬೇರೆ ಪಂಪ್ ಆಪರೇಟರ್ ನೇಮಿಸಿ ಜನರಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡುವ ವ್ಯವಸ್ಥೆ ಕೈಗೊಳ್ಳಲಾಗುವುದು. ಇಂದು ಮಧ್ಯಾಹ್ನದೊಳಗೆ ನೀರು ಸರಬರಾಜು ಪುನರಾರಂಭಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದು ವಾಪಾಸು ತೆರಳಿದರು.
ಸಮಸ್ಯೆಯ ಹಿನ್ನಲೆ:
ಪಂಪ್ ಆಪರೇಟರ್ ಆಗಿ ನೇಮಕಗೊಂಡಿದ್ದ ಕೃಷ್ಣ ಅವರು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆ ಅವರನ್ನು ಅಟೆಂಡರ್ ಹುದ್ದೆಗೆ ವರ್ಗಾಯಿಸಲಾಗಿತ್ತು. ಇತ್ತೀಚೆಗೆ ಐರೋಡಿ ಗ್ರಾಮ ಪಂಚಾಯತ್‌ನಲ್ಲಿ ಸಿಬ್ಬಂದಿ ಬದಲಾವಣೆ ನಡೆದ ಕಾರಣ ಪಂಪ್ ಆಪರೇಟರ್ ಹುದ್ದೆ ಖಾಲಿಯಾಗಿದ್ದು, ಈ ಹಿನ್ನೆಲೆಯಲ್ಲಿ ಪಿಡಿಓ ಅವರು ಕೃಷ್ಣ ಅವರನ್ನು ಮತ್ತೆ ಪಂಪ್ ಆಪರೇಟರ್ ಆಗಿ ನೇಮಿಸಿದ್ದರು. ಆದರೆ ಅವರು ಮನಬಂದಂತೆ ರಜೆ ಹಾಕಿ ನೀರು ಸರಬರಾಜು ಮಾಡದೇ ಇದ್ದುದರಿಂದ ಸಾರ್ವಜನಿಕರು ಆಕ್ರೋಶಗೊಂಡು ಪಂಚಾಯತ್‌ಗೆ ಮುತ್ತಿಗೆ ಹಾಕುವ ಸ್ಥಿತಿ ನಿರ್ಮಾಣವಾಗಿದೆ.