

ಡೈಲಿ ವಾರ್ತೆ: ಫೆ./07/2026
ವಯನಾಡಿನಲ್ಲಿ ಕೊಡಗು ಮೂಲದ ಉದ್ಯಮಿ ಕುಟುಂಬದೊಂದಿಗೆ ಆತ್ಮಹತ್ಯೆಗೆ ಯತ್ನ:ಉದ್ಯಮಿ ಮೃತ್ಯು, ಪತ್ನಿ ಗಂಭೀರ, ಇಬ್ಬರು ಮಕ್ಕಳು ಪಾರು

ಕೊಡಗು, ಫೆಬ್ರವರಿ 07: ಕೇರಳದ ವಯನಾಡು ಜಿಲ್ಲೆಯಲ್ಲಿ ಕರ್ನಾಟಕ ಮೂಲದ ಉದ್ಯಮಿಯೊಬ್ಬರು ತಮ್ಮ ಕುಟುಂಬದೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕುಟ್ಟ ಗ್ರಾಮದ ನಿವಾಸಿ ಹಾಗೂ ಉದ್ಯಮಿ ಸಜೀರ್ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಸಜೀರ್ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಕಲ್ಲಿಕೋಟೆ (ಕೋಜಿಕೋಡ್) ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಇದ್ದ ಇಬ್ಬರು ಮಕ್ಕಳನ್ನು ಸ್ಥಳೀಯ ನಿವಾಸಿಗಳು ಸಮಯಕ್ಕೆ ಸರಿಯಾಗಿ ರಕ್ಷಿಸಿದ್ದು, ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಘಟನೆ ಸಂಬಂಧ ಮಾನಂದವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.
ನಡೆದಿದ್ದೇನು?
ಮೃತ ಉದ್ಯಮಿ ಸಜೀರ್ ಅವರು ಕೊಡಗು ಜಿಲ್ಲೆಯ ಕುಟ್ಟ ಗ್ರಾಮದಲ್ಲಿ ಹಲವು ವ್ಯಾಪಾರ ಮಳಿಗೆಗಳನ್ನು ಹೊಂದಿದ್ದು, ಸ್ಥಳೀಯವಾಗಿ ಪರಿಚಿತ ಉದ್ಯಮಿಯಾಗಿದ್ದರು. ತನಿಖೆಯ ಪ್ರಾಥಮಿಕ ಮಾಹಿತಿಯಂತೆ, ಬಾಪು ಎಂಬ ವ್ಯಕ್ತಿ ಸಜೀರ್ ಅವರಿಗೆ ಸುಮಾರು 20 ಲಕ್ಷ ರೂಪಾಯಿ ಹಣವನ್ನು ಕೊಡಬೇಕಾಗಿತ್ತು ಎನ್ನಲಾಗಿದೆ.
ಸಾಲ ವಾಪಸ್ ಪಡೆಯಲು ನಿರಂತರ ಪ್ರಯತ್ನ ನಡೆಸಿದರೂ ಹಣ ಸಿಗದ ಹಿನ್ನೆಲೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಸಜೀರ್, ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿ ಸಮೀಪ ಸಾಲ ಪಡೆದಿದ್ದ ಬಾಪು ಅವರ ಮನೆಯ ಎದುರಲ್ಲೇ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಆತ್ಮಹತ್ಯೆಗೆ ಮುನ್ನ ಕಾರಿನೊಳಗೇ ಕುಳಿತು ಸಜೀರ್ ವಿಡಿಯೋ ರೆಕಾರ್ಡ್ ಮಾಡಿರುವುದು ಬೆಳಕಿಗೆ ಬಂದಿದೆ. ಆ ವಿಡಿಯೋದಲ್ಲಿ, “ನಾವು ಈ ನಿರ್ಧಾರಕ್ಕೆ ಬರಲು ಬಾಪುನೇ ಕಾರಣ” ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ತನಿಖೆ ಮುಂದುವರಿದಿದೆ
ವಿಡಿಯೋ ದಾಖಲೆ, ಸಾಲದ ವ್ಯವಹಾರ ಮತ್ತು ಘಟನೆ ನಡೆದ ಸ್ಥಳದ ಹಿನ್ನೆಲೆಗಳನ್ನು ಆಧರಿಸಿ ಮಾನಂದವಾಡಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮೃತನ ಕುಟುಂಬದ ಸದಸ್ಯರು, ಸ್ಥಳೀಯರು ಹಾಗೂ ಸಂಬಂಧಿಸಿದ ವ್ಯಕ್ತಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.