ಡೈಲಿ ವಾರ್ತೆ: 28/ಏಪ್ರಿಲ್/2025

ಮಣೂರು: ಬಿಸಿಲು ಬೇಸಿಗೆ ಶಿಬಿರ ಸಂಪನ್ನ

ಕೋಟ: ‘ಎಳವೆಯಿಂದಲೇ ಮಕ್ಕಳಿಗೆ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ತಿಳಿಸಿಕೊಟ್ಟರೆ ಅವರು ನಮ್ಮ ಆಚರಣೆಗಳನ್ನು ಉಳಿಸಿಕೊಂಡು ಹೋಗುತ್ತಾರೆ.

ಬೇಸಿಗೆ ಶಿಬಿರಗಳು ಮಕ್ಕಳ ಆತ್ಮ ವಿಶ್ವಾಸ , ಧೈರ್ಯ ಮತ್ತು ಕ್ರಿಯಾಶೀಲ ಚಟುವಟಿಕೆಗಳನ್ನು ಉತ್ತೇಜಿಸಲು ಸಹಕರಿಸುತ್ತದೆ’, ಎಂದು ಗೀತಾನಂದ ಫೌಂಡೇಶನ್ ನ ಪ್ರವರ್ತಕರಾದ ಆನಂದ ಸಿ ಕುಂದರ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಗೀತಾನಂದ ಫೌಂಡೇಶನ್ ವತಿಯಿಂದ ನಡೆದ ಎಳೇ ಬಿಸಿಲು ಬೇಸಿಗೆ ಶಿಬಿರವುಏಪ್ರಿಲ್ 15 ಕ್ಕೆ ಪ್ರಾರಂಭಗೊಂಡು ಏಪ್ರಿಲ್ 21 ರಂದು ಸಂಪನ್ನಗೊಂಡಿತು. ಶಿಬಿರದಲ್ಲಿ ಸ್ಥಳೀಯ ಸುಮಾರು 50 ಮಕ್ಕಳು ಭಾಗವಹಿಸಿದ್ದರು. ವಿಶೇಷ ಆಕರ್ಷಣೆಯಾಗಿ ಮಕ್ಕಳೇ ವೇದಿಕೆ ಅಲಂಕರಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಶಿಬಿರದಲ್ಲಿ ಪ್ರತಿ ದಿನ ಬೆಳಿಗ್ಗೆ ಯೋಗದಿಂದ ಪ್ರಾರಂಭಗೊಂಡು ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು. ವಿಶೇಷವಾಗಿ ಮಕ್ಕಳಿಗೆ ನಮ್ಮ ಆಚರಣೆಗಳ ಬಗ್ಗೆ ತಿಳಿಸಿ ಪೊರಕೆ ಕಡ್ಡಿ, ಮಡಿಲು ನೇಯುವುದನ್ನ ಮಕ್ಕಳಿಂದ ಮಾಡಿಸಲಾಯಿತು.

ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸಲು ಶಿಬಿರಾರ್ಥಿಗಳಿಗೆ ತಂಡಗಳನ್ನು ಮಾಡಿ ವಿಜೇತ ತಂಡಗಳಿಗೆ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಆಯೋಜಕರಾದ ವೈಷ್ಣವಿ ರಕ್ಷಿತ್ ಕುಂದರ್, ರಮೇಶ್ ಕುಂದರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ ಹೊಳ್ಳ, ಪೋಷಕರು ಭಾಗವಹಿಸಿದ್ದರು. ಗೀತಾನಂದ ಫೌಂಡೇಶನ್ ರವಿಕಿರಣ್ ಕೋಟ ಶಿಬಿರದ ಸಂಯೋಜಕರಾಗಿದ್ದು ದೀಕ್ಷಿತ ಮತ್ತು ಅಶ್ವಿನಿ ಸಹಕರಿಸಿದರು.