ಡೈಲಿ ವಾರ್ತೆ: 29/ಏಪ್ರಿಲ್/2025

ಶತಕ ಸಿಡಿಸಿದ ವೈಭವ್‌ ಸೂರ್ಯವಂಶಿಗೆ ಬಿಹಾರ ಸರ್ಕಾರದಿಂದ ₹10 ಲಕ್ಷ ಬಹುಮಾನ

ನವದೆಹಲಿ: ಸದ್ಯ ಕ್ರಿಕೆಟ್‌ ಜಗತ್ತಿನಲ್ಲಿ 14ರ ಪೋರ ವೈಭವ್‌ ಸೂರ್ಯವಂಶಿಯದ್ದೇ ಸುದ್ದಿ. ಗುಜರಾತ್ ಟೈಟನ್ಸ್‌ ನೀಡಿದ 210 ರನ್‌ ಗಳ ಸವಾಲನ್ನು ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ಗೆ ವರವಾಗಿದ್ದು ವೈಭವ್‌ ಅವರ ಆಟ. ಕೇವಲ 38 ಎಸೆತಗಳಲ್ಲಿ 101 ರನ್‌ ಗಳಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಇದೀಗ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರು ವೈಭವ್‌ ಸೂರ್ಯವಂಶಿ ಅವರಿಗೆ ₹10 ಲಕ್ಷ ಬಹುಮಾನ ಘೋಷಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ, ‘ಬಿಹಾರದ ವೈಭವ್‌ ಸೂರ್ಯವಂಶಿಗೆ ಅಭಿನಂದನೆಗಳು ಮತ್ತು ಶುಭಹಾರೈಕೆಗಳು. ವೈಭವ್ ಅವರು ಭಾರತ ಕ್ರಿಕೆಟ್ ತಂಡಕ್ಕೆ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ನಾನು 2024ರಲ್ಲಿ ವೈಭವ್‌ ಮತ್ತು ಅವರ ತಂದೆಯನ್ನು ಭೇಟಿಯಾಗಿದ್ದೆ. ಆಗ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದ್ದೆ. ಐಪಿಎಲ್‌ನಲ್ಲಿ ಅವರ ಅದ್ಭುತ ಆಟ ನೋಡಿ ದೂರವಾಣಿ ಕರೆ ಮಾಡಿ ಅಭಿನಂದಿಸಿದೆ. ಜತೆಗೆ ರಾಜ್ಯ ಸರ್ಕಾರದಿಂದ ₹10 ಲಕ್ಷ ಬಹುಮಾನವನ್ನೂ ನೀಡಲಾಗುವುದು’ ಎಂದು ಬರೆದುಕೊಂಡಿದ್ದಾರೆ.