ಡೈಲಿ ವಾರ್ತೆ: 29/ಏಪ್ರಿಲ್/2025

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗದಿಂದ ಶಾಸಕರ ಭೇಟಿ

ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ನಿಯೋಗವು ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಸುನೀಲ್ ಕುಮಾರ್ ರವರನ್ನು ಶಾಸಕರ ಕಚೇರಿಯಲ್ಲಿ ಭೇಟಿಯಾಗಿ ಸಮುದಾಯಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖ್ಯವಾಗಿ ಮೂರು ವಿಷಯದ ಕುರಿತು ಚರ್ಚೆ ನಡೆಸಲಾಯಿತು. ಒಂದು ಬೆಳ್ಮಣ್ ಸಮುದಾಯ ಭವನದಲ್ಲಿ ತಾತ್ಕಾಲಿಕವಾಗಿ ಉಳಿದುಕೊಂಡಿರುವ ಹರೀಶ್ ಮತ್ತು ಕುಟುಂಬದವರಿಗೆ ನೀರಿನ ಸಮಸ್ಯೆ ಹಾಗೂ ಜಾಗ ಸಮಸ್ಯೆ ಕುರಿತು ಮಾತುಕತೆ ನಡೆಸಲಾಯಿತು. ಶಾಸಕರು ಕೂಡಲೇ ಫೋನ್ ಕರೆ ಮೂಲಕ ನೀರಿನ ವ್ಯವಸ್ಥೆ ಮಾಡಿದರು. ಹಾಗೂ ಹರೀಶ್ ಇವರಿಗೆ ಕಾರ್ಕಳ ತಾಲೂಕಿನಲ್ಲಿ ಬೇರೆ ಕಡೆ ಜಾಗ ನೋಡಿ ಸದ್ಯದಲ್ಲಿ ತಿಳಿಸುತ್ತೇವೆ ಎಂದು ತಹಶೀಲ್ದಾರ್ ಹಾಗೂ ಆರ್.ಐ. ಭರವಸೆ ನೀಡಿದರು. ಎರಡನೆಯದಾಗಿ ಇನ್ನಾ ಗ್ರಾಮದಲ್ಲಿ ಎರಡು ಕುಟುಂಬಗಳಿಗೆ ಪಂಚಾಯತ್ ಮುಖಾಂತರ ಸಿಗುವ ಜಾಗದ ಇನ್ನೂ ಗಡಿ ಗುರುತು ಆಗಿರುವುದಿಲ್ಲ ಎಂದು ಶಾಸಕರಲ್ಲಿ ತಿಳಿಸಲಾಯಿತು. ಇನ್ನಾ ಪಂಚಾಯತ್ ಪಿ.ಡಿ.ಒ ಜೊತೆ ಮಾತುಕತೆ ನಡೆಸಿ ಆದಷ್ಟು ಬೇಗ ಹಕ್ಕುಪತ್ರ ಸಿಗುವ ಹಾಗೆ ಮಾಡುತ್ತೇವೆ ಎಂದು ತಹಶೀಲ್ದಾರ್ ಆಶ್ವಾಸನೆ ನೀಡಿದರು. ಮೂರನೆಯದಾಗಿ ಕಾರ್ಕಳ ತಾಲೂಕಿನ ನಿಟ್ಟೆಯಲ್ಲಿ ಹದಿಮೂರು ಕುಟುಂಬಗಳಿಗೆ ಭೂಮಿ ಮಂಜೂರಾತಿ ಆಗಿದ್ದು, ಆದಷ್ಟು ಬೇಗ ಅದರ ಮುಂದಿನ ಕಾರ್ಯಯೋಜನೆಗಳನ್ನು ತಯಾರಿಸುವಂತೆ ಶಾಸಕರಲ್ಲಿ ಹಾಗೂ ತಹಶೀಲ್ದಾರ್ ರಲ್ಲಿ ಕೇಳಿಕೊಳ್ಳಲಾಯಿತು.

ಹಾಗೆಯೇ ಕೊರಗ ಸಮುದಾಯದ ಎಲ್ಲಾ ರೀತಿಯ ಸಮಸ್ಯೆಗಳನ್ನು ಬಗೆಹರಿಸುವಂತೆ ಶಾಸಕರು ಭರವಸೆ ನೀಡಿದರು. ತಿಂಗಳಲ್ಲಿ ಎರಡು ಸಲ ತಮ್ಮ ಕಚೇರಿಯಲ್ಲಿ ಕೊರಗ ಸಮುದಾಯದ ಕುಂದು ಕೊರತೆಗಳ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಎಂದು ಸ್ವತಃ ಶಾಸಕರು ಹೇಳಿದರು. ಅದರಂತೆಯೇ ಸಂಘ ಸಭೆಗಳಲ್ಲಿ ದಿನಾಂಕ ನಿಗದಿ ಪಡಿಸಿ ತಿಂಗಳಲ್ಲಿ ಎರಡು ಸಲ ಶಾಸಕರನ್ನು ಭೇಟಿ ಯಾಗುವಂತೆ ಸಮುದಾಯದ ಜನರಲ್ಲಿ ಮಾತುಕತೆ ನಡೆಸಲಾಯಿತು. ಸಭೆಯಲ್ಲಿ ಕಾರ್ಕಳ ತಹಸೀಲ್ದಾರ್ ಮತ್ತು ಆರ್.ಐ. ಉಪಸ್ಥಿತರಿದ್ದು ಸಮಸ್ಯೆಗಳಿಗೆ ಸ್ಪಂದಿಸಿದರು.

ಒಕ್ಕೂಟದ ನಿಯೋಗದಲ್ಲಿ ನರಸಿಂಹ ಪೆರ್ಡೂರು, ಒಕ್ಕೂಟದ ಜೊತೆ ಕಾರ್ಯದರ್ಶಿಯಾದ ಶೀನ ಇನ್ನಾ, ಹಾಗೂ ಫಲಾನುಭವಿಗಳಾದ ಹರೀಶ, ಗುಲಾಬಿ, ರಮಣಿ, ರೋಹಿತ್, ಅಕ್ಕು ಮತ್ತಿತರು ಉಪಸ್ಥಿತರಿದ್ದರು.