



ಡೈಲಿ ವಾರ್ತೆ: 02/JUNE/2025


ಮಂಗಳೂರು| ಅಪಾರ್ಟ್‌ಮೆಂಟ್ ನಲ್ಲಿ ಅಗ್ನಿ ಅವಘಡ – ಅಗ್ನಿ ಶಾಮಕ ಸಿಬ್ಬಂದಿಗಳಿಂದ ಕಾರ್ಯಾಚರಣೆ

ಮಂಗಳೂರು: ನಗರದ ಸ್ಟೇಟ್ ಬ್ಯಾಂಕ್ ನ ರಾವ್ ಆ್ಯಂಡ್ ರಾವ್ ವೃತ್ತದ ಬಳಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದೆ.
ಸೋಮವಾರ ಮುಂಜಾನೆ ವೇಳೆ, ಅಪಾರ್ಟ್‌ಮೆಂಟ್ ನ ಎರಡನೇ ಮಹಡಿಯ ಮನೆಯಲ್ಲಿ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿದ ತತ್ ಕ್ಷಣ ಪಾಂಡೇಶ್ವರ ಅಗ್ನಿಶಾಮಕ ಠಾಣೆ ಅಧಿಕಾರಿ ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಮನೆಯಲ್ಲಿದ್ದ ಸೋಫಾ, ಎಲೆಕ್ಟ್ರಾನಿಕ್ ಉಪಕರಣಗಳು ಬೆಂಕಿಗೆ ಆಹುತಿಯಾಗಿದೆ.
ಮನೆಯಲ್ಲಿ ವಿದ್ಯಾರ್ಥಿಗಳು ಬಾಡಿಗೆಗೆ ಇದ್ದರು ಅದೃಷ್ಟಾವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
ಹೀಟರ್ ಬಳಕೆ ವೇಳೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಮನೆ ಹಾಗೂ ಎರಡನೇ ಮಹಡಿಯಲ್ಲಿ ದಟ್ಟ ಹೊಗೆ ಆವರಿಸಿದ ಕಾರಣ ಅಗ್ನಿ ಶಾಮಕದಳದ ಸಿಬಂದಿ ಆಕ್ಸಿಜನ್ ಮಾಸ್ಕ್ ಸಿಲಿಂಡರ್‌ಗಳನ್ನು ಬಳಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಫ್ಯಾನ್ ಗಳನ್ನು ಬಳಸಿ ಹೊಗೆಯನ್ನು ಹೊರ ಬಿಡಲಾಯಿತು. ಸುಮಾರು 75 ಸಾವಿರ ರೂ.ನಷ್ಟು ನಷ್ಟ ಉಂಟಾಗಿದೆ ಎಂದು ತಿಳಿದು ಬಂದಿದೆ.