


ಡೈಲಿ ವಾರ್ತೆ: 16/ಜುಲೈ/2025


ದ.ಕ ಜಿಲ್ಲೆಗೆ ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡುವುದನ್ನು ವಿರೋಧಿಸಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಲವು ತಾಲೂಕುಗಳ ಒಂದು ಒಕ್ಕೂಟವಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯನ್ನು ‘ಮಂಗಳೂರು ಜಿಲ್ಲೆ’ ಎಂದು ಹೆಸರು ಬದಲಾವಣೆ ಮಾಡುವ ಪ್ರಸ್ತಾಪದ ವಿರುದ್ಧ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ವತಿಯಿಂದ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಹೆಸರು ಬದಲಾವಣೆ ಮಾಡುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಈಗಾಗಲೇ ಹಿಂದುಳಿದಿರುವ ಸುಳ್ಯ, ಬೆಳ್ತಂಗಡಿ, ಕಡಬ,ಬಂಟ್ವಾಳ ,ಪುತ್ತೂರು,ಉಳ್ಳಾಲ, ಮೂಲ್ಕಿ ಮೂಡಬಿದ್ರೆ ಸೇರಿದಂತೆ ಎಲ್ಲಾ ತಾಲೂಕುಗಳ ಅಭಿವೃದ್ಧಿ ಯ ಮೇಲೆ ನೇರ ಪರಿಣಾಮ ಬೀಳಲಿದೆ. ಈಗಾಗಲೇ ಈ ತಾಲೂಕುಗಳು ರಾಜಕೀಯವಾಗಿ, ಆರ್ಥಿಕವಾಗಿ ಅವಕಾಶದಿಂದ ವಂಚಿತವಾಗಿದೆ. ಜಿಲ್ಲಾ ಕೇಂದ್ರದಿಂದ ದೂರವಿರುವ ಕಾರಣ ಇನ್ನು ಮಂಗಳೂರು ಜಿಲ್ಲೆ ಯಾದರೆ ಮತ್ತಷ್ಟು ಅವಕಾಶಗಳಿಂದ ವಂಚಿತವಾಗುವ ಸಂಭವವಿದೆ.
ದಕ್ಷಿಣ ಕನ್ನಡ ಜಿಲ್ಲೆ ಒಂದು ಬಹು ಸಂಸ್ಕೃತಿಯ ನಾಡಾಗಿದ್ದು ಮಂಗಳೂರಿನ ತುಳು ಭಾಷೆ, ಸಂಸ್ಕೃತಿಗೂ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬದ ಬಂಟ್ಬಾಳದ ತುಳು ಭಾಷೆ ಮತ್ತು ಸಂಸ್ಕೃತಿಗೂ ಇನ್ನಿತರ ಆಚರಣೆಗಳಿಗೂ ಹಲವಾರು ವ್ಯತ್ಯಾಸಗಳಿವೆ.
ಈ ಬಹು ಸಂಸ್ಕೃತಿಯ ಮೇಲೆ ಏಕಮುಖ ಸಂಸ್ಕೃತಿಯು ಪರಿಣಾಮ ಬೀರಲಿದೆ. ತುಳು ನಾಡು ಎನ್ನುವುದನ್ನು ಮುಂದಿಟ್ಟು ನಡೆಯುತ್ತಿರುವ ಮಂಗಳೂರು ಜಿಲ್ಲಾ ಅಭಿಯಾನವು ತುಳುನಾಡಿನ ಬಹು ಸಂಸ್ಕೃತಿಗೆ ವಿರೋಧ ವಾಗಿರುವ ಅಭಿಯಾನವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯು ಬ್ಯಾರಿ, ಕೊಂಕಣಿ, ಕನ್ನಡ ಸೇರಿದಂತೆ ಬಹುಭಾಷೆಗಳಿಂದ ರೂಪಿತವಾದ ಪ್ರದೇಶವಾಗಿದ್ದು ಇದನ್ನು ಬದಿಗಿಟ್ಟು ಕೇವಲ ‘ತುಳು ವನ್ನು ಕೇಂದ್ರೀಕರಿಸಿ ಅಭಿಯಾನ ನಡೆಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂದು ಹೆಸರು ಬದಲಾವಣೆ ಮಾಡುವುದು ಈ ನಾಡಿನ ಇತಿಹಾಸಕ್ಕೆ ಹಾಗೂ ವಿವಿಧ ಸಂಸ್ಕೃತಿಗಳಿಗೆ ಮಾಡುವ ಅನ್ಯಾಯ ವಾಗುತ್ತದೆ. ಸಾಂಸ್ಕೃತಿಕವಾಗಿ ಮಾತ್ರವಲ್ಲದೇ ಬೌಗೋಳಿಕವಾಗಿಯೂ ದಕ್ಷಿಣ ಕನ್ನಡದ ಎಲ್ಲಾ ತಾಲೂಕುಗಳು ಭಿನ್ನತೆಯನ್ನು ಹೊಂದಿದೆ. ರಾಜ್ಯದ ಇತರ ಜಿಲ್ಲೆಗಳಂತೆ ಇಡೀ ಜಿಲ್ಲೆ ಒಂದೇ ಬೌಗೋಳಿಕ ಸನ್ನಿವೇಶವನ್ನು ದಕ್ಷಿಣ ಕನ್ನಡ ಜಿಲ್ಲೆ ಹೊಂದಿಲ್ಲ.
ಬೆಳ್ತಂಗಡಿ, ಸುಳ್ಯ, ಕಡಬ, ಪುತ್ತೂರು ಬಂಟ್ವಾಳ ಉಳ್ಳಾಲ, ಮೂಲ್ಕಿ ಮೂಡಬಿದ್ರೆ ತಾಲೂಕಿನ ಹಲವಾರು ಗ್ರಾಮಗಳು ಇನ್ನೂ ಕುಗ್ರಾಮಗಳ ಸ್ಥಿತಿಯಲ್ಲಿದೆ ಹಾಗೂ ಎಲ್ಲಾ ಸೌಲಭ್ಯಗಳಿಂದ ಮರೀಚಿಕೆಯಾಗಿದೆ.
ಮಂಗಳೂರು ನಗರ ಕೇಂದ್ರಿತ ಅಭಿವೃದ್ದಿಯು ಬೆಳ್ತಂಗಡಿ,ಪುತ್ತೂರು ಸುಳ್ಯ,ಬಂಟ್ವಾಳ, ಉಳ್ಳಾಲ, ಮೂಲ್ಕಿ ಮೂಡಬಿದ್ರೆ , ಕಡಬವನ್ನು ಅಭಿವೃದ್ದಿಪಡಿಸಲು ಸಾಧ್ಯವಿಲ್ಲ.
ಆಡಳಿತ ವಿಕೇಂದ್ರಿಕರಣ ಗೊಂಡಿದ್ದರೂ ನಗರ ಕೇಂದ್ರಿತ ಮನಸ್ಥಿತಿಯಿಂದಾಗಿ ಬೆಳ್ತಂಗಡಿ, ಸುಳ್ಯ, ಕಡಬದ ಹಳ್ಳಿಗಳಿಗೆ ಆಡಳಿತದ ಗಮನ ಇಲ್ಲದೇ ಇರುವುದು ಈಗಾಗಲೇ ಆ ಪ್ರದೇಶಗಳು ಹಿಂದುಳಿದಿರುವುದನ್ನು ಕಾಣಬಹುದು. ನಗರ ಕೇಂದ್ರಿತ ಅಭಿವೃದ್ದಿಯಿಂದಾಗಿಯೇ ಇನ್ನೂ ಕೂಡಾ ಹಲವು ಗ್ರಾಮಗಳಲ್ಲಿ ಆಸ್ಪತ್ರೆಗಳಿಗೆ ಜನರನ್ನು ಹೊತ್ತುಕೊಂಡು ಹೋಗಬೇಕಾದ, ನದಿ ದಾಟಬೇಕಾದ ಸ್ಥಿತಿ ಇದೆ. ದಕ್ಷಿಣ ಕನ್ನಡ ಜಿಲ್ಲೆ ಎಂಬ ವಿಕೇಂದ್ರಿಕರಣ ಸೂಚಕ ಹೆಸರಿದ್ದಾಗ್ಯೂ ಯಾವುದೇ ಅನುದಾನಗಳು , ಯೋಜನೆಗಳು ಈ ಗ್ರಾಮಗಳನ್ನು ತಲುಪಿಲ್ಲ. ಇನ್ನು ಮಂಗಳೂರು ನಗರ ಕೇಂದ್ರಿತವಾಗಿ ಜಿಲ್ಲೆಯ ಹೆಸರು ಬದಲಾವಣೆ ಯಾದರೆ ಈ ಪ್ರದೇಶಗಳು ಮತ್ತಷ್ಟು ಅಭಿವೃದ್ಧಿ ಯಿಂದ ವಂಚನೆಗೆ ಒಳಗಾಗುವ ಸನ್ನಿವೇಶಗಳು ಉಂಟಾಗುತ್ತದೆ. ಇದಲ್ಲದೇ ಮಂಗಳೂರು ಜಿಲ್ಲೆ ಎನ್ನುವುದು ಪುತ್ತೂರು,ಬೆಳ್ತಂಗಡಿ,ಬಂಟ್ವಾಳ,ಕಡಬ, ಸುಳ್ಯ, ಮೂಲ್ಕಿ , ಮೂಡಬಿದ್ರೆ , ಉಳ್ಳಾಲ ಸೇರಿದಂತೆ ಎಲ್ಲಾ ತಾಲೂಕುಗಳ ರಾಜಕೀಯ ಅವಕಾಶವನ್ನು ಕಸಿದುಕೊಳ್ಳುತ್ತದೆ.
ಅಲ್ಲದೆ ಬೆಳ್ತಂಗಡಿ ಸುಳ್ಯ ಪುತ್ತೂರು ಭಾಗದಲ್ಲಿ ಹೆಚ್ಚಿನ ಜನ ಕೃಷಿಯನ್ನೇ ನಂಬಿ ಜೀವನ ನಡೆಸುವವರಾಗಿದ್ದು ನಗರ ಕೇಂದ್ರೀತ ಅಭಿವೃದ್ಧಿ ಯಿಂದ ಕೃಷಿಗೆ ಬೇಕಾದ ಉತ್ತೇಜನಗಳು ಕೂಡಾ ಕಡಿಮೆಯಾಗುತ್ತದೆ.
ಅಲ್ಲದೇ ಈಗಾಗಲೇ ಅರಣ್ಯ ಇಲಾಖೆಯಿಂದ ಒಕ್ಕಲೆಬ್ಬಿಸುವ ಬೀದಿ ಯಲ್ಲಿರುವ ಬೆಳ್ತಂಗಡಿ ಭಾಗದ ಕಾಡುತ್ಫಿಯನ್ನೇ ನಂಬಿ ಜೀವನ ನಡೆಸುವ ಆದಿವಾಸಿ ಸಮುದಾಯ ಗಳು ಕೂಡಾ ಮತ್ತಷ್ಟು ತೊಂದರೆಗೆ ಒಳಗಾಗುವ ಸನ್ನಿವೇಶ ಉಂಟಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾವಣೆ ಮಾಡುವುದು ಯಾವುದೇ ವಿಷಯದಲ್ಲೂ ಒಪ್ಪತಕ್ಕ ವಿಚಾರವಲ್ಲ.
ಈಗಾಗಲೇ ಜಿಲ್ಲೆಯಲ್ಲಿ ಧರ್ಮಾಧಾರಿತ ವಿಷಯಗಳು,ಕೋಮು ಸಂಘರ್ಷಗಳು ಜಿಲ್ಲೆಗೆ ಕಳಂಕ ತಂದಿದೆ. ಹೆಸರು ಬದಲಾವಣೆಗಿಂತ ಮುಖ್ಯವಾಗಿ ಇಲ್ಲಿನ ಸೌಹಾರ್ಧತೆ, ಜನರ ಬದುಕಿನ ಪ್ರಶ್ನೆಗಳು , ಉದ್ಯೋಗ , ಅಭಿವೃದ್ಧಿ ಮುಂತಾದ ವಿಷಯಗಳ ಬಗ್ಗೆ ಗಮನಕೊಡವುದು ಮಹತ್ವದ ವಿಚಾರವಾಗಿದೆ.
ಯಾವುದೇ ಕಾರಣಕ್ಕೂ ಬಹು ಸಂಸ್ಕತಿಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಹೆಸರು ಬದಲಾವಣೆ ಮಾಡಬಾರದು ಹಾಗೂ ಜಿಲ್ಲೆಯ ಕೋಮು ಸೌಹಾರ್ಧತೆ ಗೆ ದಕ್ಕೆ ಉಂಟುಮಾಡುವ ಮೂಲಕ ಜಿಲ್ಲೆಯ ಅಭಿವೃದ್ಧಿ ಗೆ ಮಾರಕ ವಾಗಿರುವ ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿ ಗೆ ವಿಶೇಷ ಗಮನ ನೀಡಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ವಾದಿ , ಲೆನಿವಾದಿ) ಲಿಬರೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ದಕ್ಷಿಣ ಕನ್ನಡ ಅಪರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ನೀಡಿದ ಮನವಿಯಲ್ಲಿ ತಿಳಿಸಲಾಗಿದೆ.
ನಿಯೋಗದಲ್ಲಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ರಾಜ್ಯ ಸಮಿತಿ ಸದಸ್ಯ ಮೋಹನ್ ಕೆ.ಇ, ಜಿಲ್ಲಾ ಸಮಿತಿ ಸದಸ್ಯರಾದ ರಾಜಾ ಚೆಂಡ್ತಿಮಾರ್, ಸಜೇಶ್ ವಿಟ್ಲ, ಬಂಟ್ವಾಳ ತಾಲೂಕು ಸಮಿತಿ ಮುಖಂಡರಾದ ಅಚ್ಯುತ ಕಟ್ಟೆ , ಲಿಯಕತ್ ಖಾನ್, ಮಂಗಳೂರು ತಾಲೂಕು ಮುಖಂಡರಾದ ಮಹಮ್ಮದ್ ಝಿಲಾನಿ ಮುಂತಾದವರು ನಿಯೋಗದಲ್ಲಿ ಉಪಸ್ಥಿತರಿದ್ದರು.