ಡೈಲಿ ವಾರ್ತೆ: 16/ಜುಲೈ/2025

ಮೂರು ವರ್ಷದ ಹಿಂದೆ ಕಾಗೆ ಹೊತ್ತೊಯ್ದ ಚಿನ್ನದ ಬಳೆ ಮರಳಿ ಒಡತಿಯ ಕೈಗೆ

ತಿರುವನಂತಪುರಂ: ಮೂರು ವರ್ಷದ ಹಿಂದೆ ಕಾಗೆ ಹೊತ್ತೊಯ್ದಿದ್ದ ಚಿನ್ನದ ಬಳೆ ಮರಳಿ ಒಡತಿಯ ಕೈ ಸೇರಿದ ಘಟನೆ ಕೇರಳದ ಮಲಪ್ಪುರಂನ ತ್ರಿಕ್ಕಲಂಗೋಡ್‌ನಲ್ಲಿ ನಡೆದಿದೆ.

ಮೂರು ವರ್ಷದ ಹಿಂದೆ ರುಕ್ಮಿಣಿ ಕೆಲಸ ಮಾಡುವ ವೇಳೆ ಒಂದೂವರೆ ಪವನ್ ತೂಕವಿದ್ದ (12 ಗ್ರಾಂ) ಚಿನ್ನದ ಬಳೆಯನ್ನು ಕೈಯಿಂದ ತೆಗೆದಿಟ್ಟಿದ್ದರು. ಕ್ಷಣಾರ್ಧದಲ್ಲಿ ಕಾಗೆಯೊಂದು ಅವರ ಬಳೆಯನ್ನು ಎಗರಿಸಿತ್ತು. ಬಳೆಗಾಗಿ ಸ್ವಲ್ಪ ದಿನ ಹುಡುಕಾಡಿದ ರುಕ್ಮಿಣಿ ಕುಟುಂಬಸ್ಥರು ಬಳಿಕ ಅದರ ಆಸೆ ಕೈಬಿಟ್ಟಿದ್ದರು.

ಮೂರು ತಿಂಗಳ ಹಿಂದೆ ಅನ್ವರ್ ಸಾದತ್ ಎಂಬವರು ತೆಂಗಿನಕಾಯಿ ಕೀಳಲು ಹೋದ ವೇಳೆ ಮಗಳಿಗಾಗಿ ಮಾವು ಕೀಳಲು ಅನುಮತಿ ಪಡೆದು ಮರ ಹತ್ತಿ ಕೊಂಬೆ ಅಲ್ಲಾಡಿಸಿದಾಗ ಹೊಳೆಯುತ್ತಿರುವ ವಸ್ತೊಂದು ಮರದಿಂದ ಕೆಳಗೆ ಬಿದ್ದಿದೆ. ಅದನ್ನು ಪುತ್ರಿ ಫಾತಿಮಾ ಹುದಾ ಗಮನಿಸಿದ್ದಾಳೆ. ಬಳಿಕ ಅದು ಚಿನ್ನವೇ ಎಂದು ಪರಿಶೀಲಿಸಿದಾಗ ಬಳೆ ತುಂಡಾಗಿದ್ದು, ಅಸಲಿ ಚಿನ್ನವೆಂಬುದು ಖಚಿತವಾಗಿದೆ. ರುಕ್ಮಿಣಿ ಮನೆಯಿಂದ ಕೇವಲ 50 ಮೀಟರ್ ದೂರದಲ್ಲೇ ಈ ಚಿನ್ನದ ಬಳೆ ಪತ್ತೆಯಾಗಿದೆ.
ಅನ್ವರ್ ಸಾದತ್ ಈ ಚಿನ್ನದ ಬಳೆಯನ್ನು ಊರಿನ ಲೈಬ್ರರಿಗೆ ಕೊಟ್ಟು ಮಾಲೀಕರ ಕೈಸೇರಲಿ ಎಂದು ಪ್ರಾಮಾಣಿಕತೆ ಮೆರೆದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪತಿಯೊಂದಿಗೆ ಲೈಬ್ರರಿಗೆ ತೆರಳಿದ ರುಕ್ಮಿಣಿ ಬಳೆ ತನ್ನದೇ ಎಂದು ಖಚಿತಪಡಿಸಿಕೊಂಡಿದ್ದಾರೆ. ಕಳೆದು ಹೋಗಿದ್ದ ಚಿನ್ನದ ಬಳೆ ನೋಡಿ ಒಡತಿ ರುಕ್ಮಿಣಿ ದಿಲ್ ಖುಷ್ ಆಗಿದ್ದಾರೆ. ಪತ್ತೆ ಹಚ್ಚಿದವರ ಕೈಯಿಂದಲೇ ಬಳೆ ಪಡೆಯಬೇಕು ಎಂಬ ಮನವಿ ಮೇರೆಗೆ ಊರಿನವರು ಅನ್ವರ್ ಸಾದತ್ ಕೈಯಿಂದಲೇ ರುಕ್ಮಿಣಿ ಅವರಿಗೆ ಬಳೆಯನ್ನು ಮರಳಿ ಕೊಡಿಸಿದ್ದಾರೆ. ಬಳೆಯನ್ನು ಪಡೆದ ರುಕ್ಮಿಣಿ ಈ ಬಳೆಯನ್ನು ಮರಳಿ ಪಡೆಯುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.