


ಡೈಲಿ ವಾರ್ತೆ: 25/ಜುಲೈ/2025


ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು ಚೇರ್ಕಾಡಿಯಲ್ಲಿ ಶೈಕ್ಷಣಿಕ ಕಾರ್ಯಗಾರ:
ಪಠ್ಯದ ಜೊತೆಗೆ ನೈತಿಕ ಶಿಕ್ಷಣ ಮತ್ತು ಸಂಸ್ಕಾರಯುತ ಶಿಕ್ಷಣ ಅತೀ ಅಗತ್ಯ – ಶ್ರೀ ಮಾರುತಿ

ಚೇರ್ಕಾಡಿ: ಆಧುನಿಕ ಮಾಧ್ಯಮದ ಪ್ರಭಾವ, ಪೋಷಕರ ಅತಿಯಾದ ಪ್ರೀತಿ ಕಾಳಜಿಯಿಂದ ಮಕ್ಕಳನ್ನು ಕಲಿಕೆಯಲ್ಲಿ ಹಿಡಿದಿಟ್ಟುಕೊಳ್ಳುವುದು ಉಪನ್ಯಾಸಕರಿಗೆ ಸವಾಲಿನ ಕೆಲಸ. ಬೋಧನಾ ವೃತ್ತಿಯಲ್ಲಿ ಶಿಕ್ಷಕರ ಶ್ರಮ ಬಹಳ ಮುಖ್ಯ. ನಿಮ್ಮ ಬೋಧನಾ ವಿಧಾನದಲ್ಲೂ ಕೂಡ ಹೊಸತನವನ್ನು ಅಳವಡಿಸಿಕೊಳ್ಳಬೇಕು. ಕೇವಲ ಮಕ್ಕಳಿಗೆ ಅಂಕಗಳನ್ನ ಗಳಿಸುವುದಕ್ಕೋಸ್ಕರ ಬೋಧನೆ ಮಾಡದೆ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣ ಮತ್ತು ಸಂಸ್ಕಾರಯುತವಾದ ಶಿಕ್ಷಣ ನೀಡಬೇಕು.
ಮಕ್ಕಳ ಮೇಲೆ ದೈಹಿಕ ಮಾನಸಿಕ ನಿಂದನೆ ಸರಿಯಲ್ಲ. ಎಂದು ಉಡುಪಿ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ (ಪದವಿಪೂರ್ವ) ಯ ಉಪನಿರ್ದೇಶಕರಾದ ಶ್ರೀ ಮಾರುತಿ ಅವರು ಹೇಳಿದರು. ಇವರು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು, ಚೇರ್ಕಾಡಿ ಬ್ರಹ್ಮಾವರ ಇದರ ಸಂಯುಕ್ತ ಆಶ್ರಯದಲ್ಲಿ ಉಡುಪಿ ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಒಂದು ದಿನದ ಶೈಕ್ಷಣಿಕ ಕಾರ್ಯಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಸೀನರಾಗಿರುವ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ ಹಾಗೂ ಪದವಿಪೂರ್ವ ಕಾಲೇಜಿನ ಸಂಚಾಲಕರಾಗಿರುವ ಶ್ರೀ ವಸಂತ್ ಕುಮಾರ್ ಎಂ ಎಸ್ ಅವರು ಮಾತನಾಡುತ್ತಾ, ಉಪನ್ಯಾಸಕರಲ್ಲಿ ನಿರಂತರವಾದ ಕಲಿಕೆ ಇದ್ದಾಗ ಬೋಧನೆ ಪರಿಣಾಮಕಾರಿಯಾಗುತ್ತದೆ. ತನ್ನನ್ನು ವೃತ್ತಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅದರಲ್ಲಿ ಸಂತೋಷವನ್ನು ಕಂಡುಕೊಳ್ಳಬೇಕು. ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಪಸ್ ಮತ್ತು ಸಾಧನ ಎಂಬ ಎರಡು ವಿಭಾಗಗಳ ಮೂಲಕ ಉಚಿತ ಶಿಕ್ಷಣ ನೀಡಿ ಅವರನ್ನು ವೃತ್ತಿಪರ ಅಭಿಯಂತರರು ಮತ್ತು ವೈದ್ಯರನ್ನಾಗಿ ಸಮಾಜಕ್ಕೆ ಅರ್ಪಿಸುತ್ತಿದೆ ಎಂದು ರಾಷ್ಟ್ರೋತ್ಥಾನದ ಸಮಾಜಮುಖಿ ಚಟುವಟಿಕೆಗಳ ಕುರಿತು ಮಾತನಾಡಿದರು.
ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಭಾಗ್ಯಶ್ರೀ ಐತಾಳ್ ಇವರು ಮಾತನಾಡುತ್ತಾ, ಜೀವಶಾಸ್ತ್ರ ಪಠ್ಯ ವಿಷಯವು ಕೇವಲ ಪರೀಕ್ಷೆಗಾಗಿ ಓದುವ ವಿಷಯವಲ್ಲ ಬದುಕನ್ನು ಬೆಳಗಿಸುವ ವಿಷಯವಾಗಿದೆ. ಜೀವಶಾಸ್ತ್ರದ ವಿಚಾರಧಾರೆಗಳು ರಾಷ್ಟ್ರೋತ್ಥಾನದ ವಿಚಾರಧಾರೆಗಳಿಗೆ ಹೊಂದಾಣಿಕೆಯಾಗುತ್ತದೆ ಎಂದರು.
ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಉಡುಪಿ ಜಿಲ್ಲಾ ಜೀವಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿರುವ ಶ್ರೀ ಸುಬ್ರಹ್ಮಣ್ಯ ಭಟ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಉಪನ್ಯಾಸಕ ಮತ್ತು ವಿದ್ಯಾರ್ಥಿಗಳ ಸಂಬಂಧ ಆರೋಗ್ಯಕರವಾಗಿರಬೇಕು. ವೃತ್ತಿಘನತೆಯನ್ನು ಎಲ್ಲಿಯೂ ಮೀರಬಾರದು. ಶಿಕ್ಷಕ ವೃತ್ತಿಯನ್ನು ಅದರ ಮೂಲ ಸ್ವರೂಪದಲ್ಲಿ ಉಳಿಸಿಕೊಳ್ಳಬೇಕು. ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ವರ್ತಿಸಬೇಡಿ. ಎಂದು ಹೊಸ ತಲೆಮಾರಿನ ಉಪನ್ಯಾಸಕರಿಗೆ ಸಲಹೆ ನೀಡಿದರು.
ವೇದಿಕೆಯಲ್ಲಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ಸರಕಾರಿ ಪದವಿ ಪೂರ್ವ ಕಾಲೇಜು ಕುಂಶಿಯ ಪ್ರಾಂಶುಪಾಲರಾದ ಶ್ರೀ ಅರವಿಂದ್ ಕುಮಾರ್ ಕೆ, ಮಲ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶ್ರೀ ವರ್ಗೀಸ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇಬ್ಬರು ಹಿರಿಯ ಉಪನ್ಯಾಸಕರಾದ ಉಡುಪಿಯ ಪೂರ್ಣಪ್ರಜ್ನಾ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಗೀತಾ ಹಾಗೂ ಗುರುಪುರ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಶ್ರೀ ಕಿಶೋರಿ ಇವರನ್ನು ಗೌರವಾನ್ವಿತ ಅತಿಥಿಗಳ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ನಂತರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಅರವಿಂದ ಕುಮಾರ್ ಕೆ ಇವರು “ಶಿಕ್ಷಕ ಒಬ್ಬ ನಾಯಕ” ಎಂಬ ವಿಷಯದ ಮೇಲೆ ಸುದೀರ್ಘವಾಗಿ ಮಾತನಾಡಿದರು.
ಉಪನ್ಯಾಸಕಿ ಶ್ರೀಮತಿ ವಿಶಾಲಾಕ್ಷಿ ಎಂ ಇವರು ಸ್ವಾಗತಿಸಿ, ಶ್ರೀಮತಿ ಸರೋಜಾ ವಂದನಾರ್ಪಣೆಗೈದರು. ಉಪನ್ಯಾಸಕಿ ಸ್ಮಿತಾ ಗೌಡ ಕಾರ್ಯಕ್ರಮ ನಿರೂಪಿಸಿದರು.