


ಡೈಲಿ ವಾರ್ತೆ: 26/ಜುಲೈ/2025


ಬೈಕ್ ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿ – ಇಬ್ಬರು ದುರ್ಮರಣ

ಬಾಗಲಕೋಟೆ: ಬೈಕ್‌ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಕಾರಿನ ಮೇಲೆ ಲಾರಿ ಪಲ್ಟಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ರ ಸೀಮಿಕೇರಿ ಬಳಿ ನಡೆದಿದೆ.
ಬಾಗಲಕೋಟೆ ತಾಲೂಕಿನ ಕೇಸನೂರು ಗ್ರಾಮದ ನಿವಾಸಿ ರಮೇಶ್ ಹೂಗಾರ(45) ಹಾಗೂ ಗದ್ದನಕೇರಿ ನಿವಾಸಿ ಅಕ್ಬರ್ ನಬಿಸಾಬ್ ಚೇರ್ಮನ್ (33) ಮೃತರೆಂದು ಗುರುತಿಸಲಾಗಿದೆ.
ಎದುರಿಗೆ ಬಂದ ಬೈಕ್ ಡಿಕ್ಕಿಯಾಗುವುದನ್ನೂ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿ, ಕಾರಿನ ಮೇಲೆ ಪಲ್ಟಿಯಾಗಿ ಬೈಕ್‌ಗೂ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ದುರ್ಮರಣಕ್ಕಿಡಾಗಿದ್ದು, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಬೈಕ್‌ನಲ್ಲಿದ್ದ ಓರ್ವನಿಗೆ ಗಂಭೀರ ಗಾಯಗಳಾಗಿವೆ.
ಕಾರು ಮತ್ತು ಬೈಕ್ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದು, ವಿಜಯಪುರದ ಕಡೆಗೆ ಪ್ಲಾಸ್ಟಿಕ್ ಚೀಲಗಳಿರುವ ಬ್ಯಾಗ್ ಹೊತ್ತುಕೊಂಡು ಲಾರಿ ಹೊರಟಿತ್ತು. ಸ್ಥಳಕ್ಕೆ ಕಲಾದಗಿ ಪೊಲೀಸರು ಭೇಟಿ ನೀಡಿದ್ದು, ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.