ಡೈಲಿ ವಾರ್ತೆ: 26/ಜುಲೈ/2025

ಬ್ರಹ್ಮಾವರ ಪತ್ರಕರ್ತರ ಸಂಘ ಪತ್ರಿಕಾ ದಿನಾಚರಣೆ:
ಪತ್ರಿಕೋದ್ಯಮ ಫ್ಯಾಷನ್ ಆಗಿ ತೆಗೆದುಕೊಳ್ಳಬೇಡಿ, ವಿಷನ್ ಇರಲಿ – ಲಕ್ಷ್ಮೀ ಮಚ್ಚಿನ

ಕೋಟ: ಯುವಜನಾಂಗ ಪತ್ರಿಕೋದ್ಯಮದ ಬಗ್ಗೆ ಆಸಕ್ತಿ ಹೊಂದಬೇಕು. ಆದರೆ ಯಾವುದೋ ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳು, ಕಾಲ್ಪನಿಕ ಕಥೆಗಳನ್ನು ನಂಬಿಕೊಂಡು ಕೆಟ್ಟ ಫ್ಯಾಷನ್‌ನೊಂದಿಗೆ ಈ ರಂಗಕ್ಕೆ ಬರುವುದಕ್ಕಿಂತ ಒಳ್ಳೆ ವಿಷನ್‌ನ್ನು ಇಟ್ಟುಕೊಂಡು
ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ಪತ್ರಿಕೋದ್ಯಮಕ್ಕೆ ಬನ್ನಿ ಎಂದು ಉದಯವಾಣಿ
ದಿನಪತ್ರಿಕೆ ಹಿರಿಯ ವರದಿಗಾರ ಲಕ್ಷ್ಮೀ ಮಚ್ಚಿನ ತಿಳಿಸಿದರು.

ಅವರು ಮಣೂರು-ಪಡುಕರೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಜು. 26ರಂದು ನಡೆದ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ದಿನದ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಇಂದು ಸಮಾಜದಲ್ಲಿ ಸುಳ್ಳು ಯಾವುದು ಸತ್ಯ ಯಾವುದು ಎನ್ನುವುದನ್ನು ಪತ್ತೆ ಹಚ್ಚುವುದು ಕಷ್ಟವಾಗುವ ಸ್ಥಿತಿ ಇದೆ ಹಾಗೂ ಒಳ್ಳೆತನವನ್ನು ಗೌರವಿಸುವವರ ಸಂಖ್ಯೆ ಕೂಡ
ಕಡಿಮೆ ಇದೆ. ಆದರೆ ಇವೆಲ್ಲದರ ನಡುವೆ ನಾವು ಒಳ್ಳೆಯ ವಿಚಾರಗಳನ್ನು ಮೈಗೂಡಿಸಿಕೊಂಡರೆ ಅದನ್ನು ಗೌರವಿಸುವ ವರ್ಗವೂ ಇದ್ದು ಒಳ್ಳೆತನವನ್ನು ಮರೆಯಬೇಡಿ ಎಂದರು.

ಹಿರಿಯ ಪತ್ರಕರ್ತ ಯು.ಎಸ್. ಶೆಣೈ ಮಾತನಾಡಿ, ಪತ್ರಿಕೋದ್ಯಮದಲ್ಲಿ ಯುವಜನತೆಗೆ ಉತ್ತಮ ಅವಕಾಶವಿದೆ. ಆದರೆ ರಂಗದಲ್ಲಿ ಒಂದಷ್ಟು ಸವಾಲುಗಳಿರುವುದುರಿಂದ ಒಂದಷ್ಟು ಅಧ್ಯಯನ ಮಾಡಿ, ಒಳಿತು-ಕೆಡುಕುಗಳನ್ನು ತಿಳಿದು ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳಿ ಎಂದರು.

ಪಡುಕರೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಡೆನ್ನಿಸ್ ಬಾಂಜ್ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಬ್ರಹ್ಮಾವರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ಹಿರಿಯ ವರದಿಗಾರ, ಕಾರ್ಕಳ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪೇತ್ರಿ ಭಾಸ್ಕರ ರಾವ್ ಅವರಿಗೆ ಪತ್ರಿಕಾ ದಿನಾಚರಣೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಸದಸ್ಯರಾಗಿ ಆಯ್ಕೆಯಾದ ಯು.ಎಸ್. ಶೆಣೈ ಅವರನ್ನು
ಗೌರವಿಸಲಾಯಿತು.

ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಅಲೆವೂರು ರಾಜೇಶ್ ಶೆಟ್ಟಿ, ಬ್ರಹ್ಮಾವರ ತಾಲೂಕು ಕಾರ್ಯದರ್ಶಿ ಹರೀಶ್ ಕಿರಣ್ ತುಂಗ, ಸದಸ್ಯರಾದ ರವೀಂದ್ರ ಕೋಟ, ಪ್ರವೀಣ್ ಮುದ್ದೂರು, ಗಣೇಶ್ ಸಾಬ್ರಕಟ್ಟೆ, ಪ್ರವೀಣ್ ಕುಮಾರ್, ಇಬ್ರಾಹಿಂ ಸಾಹೇಬ್, ಉಪಸ್ಥಿತರಿದ್ದರು.
ಸಂಘದ ಸದಸ್ಯ ಮೋಹನ್ ಉಡುಪ ಸ್ವಾಗತಿಸಿ, ಬಂಡೀಮಠ ಶಿವರಾಮ ಆಚಾರ್ಯ ಹಾಗೂ
ಕೆ.ಜಿ.ವೈದ್ಯ ಸಮ್ಮಾನಿತರನ್ನು ಪರಿಚಯಿಸಿದರು.
ಸಂಘದ ಸ್ಥಾಪಕಾಧ್ಯಕ್ಷ ಚಿತ್ತೂರು
ಪ್ರಭಾಕರ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ಹರೀಶ್ ಕಿರಣ್ ತುಂಗ ವಂದಿಸಿದರು.