


ಡೈಲಿ ವಾರ್ತೆ: 06/ಆಗಸ್ಟ್/ 2025


ಧರ್ಮಸ್ಥಳದಲ್ಲಿ ಪರ-ವಿರೋಧ ಗಲಾಟೆ: ಯೂಟ್ಯೂಬ್, ಮಾಧ್ಯಮ ಸಿಬಂದಿಗೆ ಹಲ್ಲೆ! ಆಕ್ಷೇಪಾರ್ಹ ವಿಡಿಯೋ ಇದ್ದರೆ ದಾಖಲೆ ಕೊಡಿ, ಕೇಸು ದಾಖಲಿಸ್ತೇವೆಂದ ಎಸ್ಪಿ

ಮಂಗಳೂರು: ಧರ್ಮಸ್ಥಳದಲ್ಲಿ ಹೆಣ ಹೂತ ಆರೋಪದ ಪ್ರಕರಣ ಬಗ್ಗೆ ಸುದ್ದಿ ಬಿತ್ತರಿಸುವ ವಿಚಾರದಲ್ಲಿಯೇ ಈಗ ಪರ-ವಿರೋಧ ವ್ಯಕ್ತವಾಗಿದ್ದು, ಸ್ಥಳೀಯರು ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದೀರಿ ಎಂದು ಯೂಟ್ಯೂಬ್ ಚಾನೆಲ್ ಸಿಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.

ಬುಧವಾರ ಸಂಜೆ ಧರ್ಮಸ್ಥಳ ಬಳಿಯ ಪಾಂಗಾಳ ಎಂಬಲ್ಲಿ ಘಟನೆ ನಡೆದಿದ್ದು, ಧರ್ಮಸ್ಥಳ ಮತ್ತು ಹೋರಾಟಗಾರರ ಪರ ಇರುವ ಜನರು ಒಂದೆಡೆ ಸೇರಿ ಜಟಾಪಟಿ ನಡೆಸಿದ್ದಾರೆ.
ಬಿಗ್ ಬಾಸ್ ನಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ರಜತ್ ಎಂಬವರು ಬುಧವಾರ ಸಂಜೆ ಸೌಜನ್ಯಾ ಮನೆಗೆ ಬಂದಿದ್ದು ಕುಟುಂಬಸ್ಥರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಈ ವೇಳೆ, ಕುಡ್ಲ ರಾಂಪೇಜ್, ಯುನೈಟೆಡ್ ಇಂಡಿಯಾ ಮತ್ತಿತರ ಯೂಟ್ಯೂಬ್ ಚಾನೆಲ್ಗಳವರು ಅಲ್ಲಿಗೆ ತೆರಳಿದ್ದು ರಜತ್ ಅಭಿಪ್ರಾಯ ಪಡೆಯಲು ಮುಂದಾಗಿದ್ದರು. ಇದೇ ವೇಳೆ, ಸ್ಥಳೀಯ ಯುವಕರು ಸೇರಿದ್ದು ಕುಡ್ಲ ರಾಂಪೇಜ್ ತಂಡದ ಅಜಯ್ ಅಂಚನ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಹೀಗಳೆದು ಸುದ್ದಿ ಮಾಡ್ತೀಯಲ್ವಾ. ವಿಡಿಯೋದಲ್ಲಿ ಭಾರೀ ಮಾತಾಡ್ತೀಯಾ ಎಂದು ಪ್ರಶ್ನಿಸಿದ್ದು ಈ ವೇಳೆ ಮಾತಿಗೆ ಮಾತು ಬೆಳೆದಿತ್ತು.
ಸ್ಥಳೀಯರು ಸೇರಿ ಅಜಯ್ ಅಂಚನ್, ಆತನ ಜೊತೆಗಿದ್ದ ಮೂವರ ಮೇಲೂ ಕೈಯಿಂದ ಹಲ್ಲೆ ನಡೆಸಿದ್ದಾರೆ. ಆನಂತರ, ಎರಡೂ ಕಡೆಯ ಜನರು ಪಾಂಗಾಳದಲ್ಲಿ ಸೇರಿದ್ದಾರೆ. ಪೊಲೀಸರು ಶಾಂತಿಯಿಂದಿರಿ, ಉದ್ರಿಕ್ತರಾಗಬೇಡಿ ಎನ್ನುತ್ತಿದ್ದಾಗಲೇ ತಳ್ಳಾಟ, ಹೊಡೆದಾಟ ಆಗಿದೆ. ಆನಂತರ ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸಿದ್ದಾರೆ. ಇದಲ್ಲದೆ, ಹಲ್ಲೆಗೀಡಾದ ನಾಲ್ವರು ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರ ಬೆನ್ನಲ್ಲೇ ಉಜಿರೆ ಬೆನಕ ಆಸ್ಪತ್ರೆಯ ಮುಂದೆ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್ ಮತ್ತು ಅವರ ತಂಡ ಸೇರಿದ್ದು ಧರ್ಮಸ್ಥಳದವರ ಬಗ್ಗೆ ಆರೋಪ ಮಾಡಿದ್ದಾರೆ. ಇದೇ ವೇಳೆ, ಸುವರ್ಣ ವಾಹಿನಿಯ ಬೆಂಗಳೂರಿನಿಂದ ಬಂದಿದ್ದ ವರದಿಗಾರರ ಮೇಲೆ ತಿಮರೋಡಿ ಕಡೆಯವರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಕೋರ್ಟ್ ಮಾಧ್ಯಮ ಮೇಲಿನ ನಿರ್ಬಂಧ ತೆಗೆದುಹಾಕಿದ್ದಕ್ಕೆ ಹತಾಶೆಗೊಂಡು ಧರ್ಮಸ್ಥಳ ಕಡೆಯವರು ಮಾಧ್ಯಮದವರ ಮೇಲೆ ಹಲ್ಲೆ ಮಾಡಿದ್ದಾರೆ. ಕೋರ್ಟಿನಿಂದ ನಿರ್ಬಂಧವನ್ನು ತೆಗೆದು ಹಾಕಿದ್ದೇವೆ, ಯಾರು ಏನು ಬೇಕಾದರೂ ಸುದ್ದಿ ಮಾಡಿ, ಇಲ್ಲಿ ಗಲಾಟೆ ಮಾಡಬೇಡಿ ಎಂದು ಮಹೇಶ್ ಶೆಟ್ಟಿ ತಿಮರೋಡಿ ಉಜಿರೆ ಬೆನಕ ಆಸ್ಪತ್ರೆಯ ಮುಂದೆ ಸೇರಿದ್ದ ಜನರೊಂದಿಗೆ ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದೇ ವೇಳೆ, ಹಲ್ಲೆ ಘಟನೆ ಬಗ್ಗೆ ದ.ಕ. ಎಸ್ಪಿ ಡಾ.ಅರುಣ್ ಸ್ಥಳಕ್ಕೆ ತೆರಳಿದ್ದು ಪರಿಸ್ಥಿತಿ ಶಾಂತವಾಗಿರುವುದನ್ನು ದೃಢಪಡಿಸಿದ್ದಾರೆ. ಹಲ್ಲೆ ಘಟನೆ ಬಗ್ಗೆ ಪ್ರಕರಣ ದಾಖಲಿಸುತ್ತೇವೆ, ಅದೇ ರೀತಿ ಯೂಟ್ಯೂಬ್ ನಲ್ಲಿ ಆಕ್ಷೇಪಾರ್ಹ ಸುದ್ದಿ ಮಾಡಿರುವ ಬಗ್ಗೆ ದಾಖಲೆಯನ್ನು ಕೊಡಿ, ನಾವು ಅದರ ಬಗ್ಗೆಯೂ ಪ್ರಕರಣ ದಾಖಲಿಸುತ್ತೇವೆ ಎಂದಿದ್ದಾರೆ. ಧರ್ಮಸ್ಥಳ ಪರವಾಗಿ ಪ್ರತಿಭಟನೆಗೆ ಸಜ್ಜಾಗಿದ್ದ ಜನರನ್ನು ಪೊಲೀಸರು ಮನವೊಲಿಸಿ ಹಿಂದಕ್ಕೆ ಕಳಿಸಿದ್ದಾರೆ. ಒಟ್ಟಿನಲ್ಲಿ ಎಸ್‌ಐಟಿ ತನಿಖೆ ನಡೆಯುತ್ತಿರುವಾಗಲೇ ಧರ್ಮಸ್ಥಳ ಉದ್ವಿಗ್ನ ಆಗಿರುವುದು ಹೊಸ ಬೆಳವಣಿಗೆ.